Government Scheme govt. scheme.

ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

 ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

2023-24ನೇ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಘೋಷಿಸಿದ 5 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ, ಕೃಷಿ, ಹೈನುಗಾರಿಕೆ, ತೋಟಗಾರಿಕೆ ಸಬ್ಸಿಡಿ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸ ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ –

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವ ಮುನ್ನ ವಾಚಿಸಿದ ಕವಿವಾಣಿ. ಅಂತೆಯೇ ಪೂರಾ ಬಜೆಟ್ ಕೃಷಿ ಮತ್ತು ಕೃಷಿ ಪೂರಕ ಕಸುಬುಗಳ ಹಿನ್ನಲೆಯಲ್ಲಿ ರೂಪಗೊಂಡಿರುವುದು ವಿಶೇಷ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂಪಾಯಿ ಅನುದಾನ ಘೋಷಣೆಯಾಗಿದೆ. ಬಜೆಟ್ ಭಾಷಣದಲ್ಲಿ ಸಿಎಂ ಈ ಬಾರಿ ಕೃಷಿ ವಲಯದ ಬೆಳವಣಿಗೆ ಶೇ.5.5ರಷ್ಟಿದೆ ಎಂದು ಮಾಹಿತಿ ನೀಡುವ ಮೂಲಕ ರೈತರಿಗಾಗಿ ವಿವಿಧ ಸಹಾಯಧನಗಳನ್ನು ಘೋಷಿಸಿದ್ದಾರೆ. ಅವುಗಳ ಕಂಪ್ಲೀಟ್ ಮಾಹಿತಿ ನೋಡೋಣ…

ಬಡ್ಡಿರಹಿತ ಸಾಲದ ಮೊತ್ತ 5 ಲಕ್ಷಕ್ಕೆ ಹೆಚ್ಚಳ

ಬಹುಮುಖ್ಯವಾಗಿ ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಹೀಗಾಗಿ ಈ ಬಾರಿ ಬಡ್ಡಿ ಇಲ್ಲದೇ ರೈತರಿಗೆ 5 ಲಕ್ಷ ರೂಪಾಯಿ ಸಾಲ ಸಿಗಲಿದೆ. 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25,000 ಕೋಟಿ ಸಾಲ ನೀಡಲಾಗಿದೆ ಎಂದು ಸಿಎಂ ತಿಳಿಸಿದರು. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂಪಾಯಿಗಳಷ್ಟು ಸಾಲ ವಿತರಿಸಲಾಗುವುದು ಎಂದು ಸಿಎಂ ತಿಳಿಸಿದರು.

ಭೂ ಸಿರಿ ಯೋಜನೆ

ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ಹೊಸ ಯೋಜನೆ ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ 2023-24ನೇ ಸಾಲಿನಿಂದ ರೈತರಿಗೆ 10 ಸಾವಿರ ರೂಪಾಯಿ ಹೆಚ್ಚುವರಿ ಸಹಾಯಧನ ನೀಡಲಾಗುವುದು. ಇದರಿಂದ ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂಪಾಯಿ ಹಾಗೂ ನಬಾರ್ಡ್‌ನ 7,500 ರೂಪಾಯಿ ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ರೈತ ಸಿರಿ ಯೋಜನೆಯಡಿ ಪ್ರೋತ್ಸಾಹಧನ

ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೀಗಾಗಿ ಸಿರಿಧಾನ್ಯ ಉತ್ಪಾದನೆಗೆ ರೈತರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ.

5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ

2022-23ನೇ ಸಾಲಿನಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಪ್ರತಿ ಕ್ವಿಂಟಾಲ್‌ಗೆ 3,578 ರೂಪಾಯಿಯಂತೆ ಒಟ್ಟು 1,879 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ 75 ಸಾವಿರ ರೈತರಿಂದ ಭತ್ತ ಹಾಗೂ 40 ಸಾವಿರ ರೈತರಿಂದ ಬಿಳಿ ಜೋಳವನ್ನು ಖರೀದಿಸಲು 1,072 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಬೆಳೆ ಹಾನಿ ಪರಿಹಾರ ತ್ವರಿತ ಜಮೆ

ರಾಜ್ಯದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಬೆಳೆ ಹಾನಿಗೆ ಕೇಂದ್ರವು ನಿಗದಿ ಪಡಿಸಿರುವ ಪರಿಹಾರವನ್ನು ಹೆಚ್ಚಿಸಿ ರಾಜ್ಯ ಸರ್ಕಾರವು ಪರಿಷ್ಕೃತ ದರದಲ್ಲಿ ದಾಖಲೆಯ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರವನ್ನು ಜಮೆ ಮಾಡಿದೆ. 2022-23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,031 ಕೋಟಿ ರೂಪಾಯಿಗಳನ್ನು ಎರಡು ತಿಂಗಳೊಳಗೆ ಜಮೆ ಮಾಡಲಾಗಿದೆ ಎಂದು ಸಿಎಂ ಹೇಳಿದರು. ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿಯಂತೆ 223 ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಜೀವನ್‌ಜ್ಯೋತಿ ವಿಮಾ ಯೋಜನೆ

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಬಗ್ಗೆಯೂ ಸಿಎಂ ಪ್ರಮುಖ ಘೋಷಣೆ ಮಾಡಿದ್ದಾರೆ. ಈ ಯೋಜನೆಯು ನಾಗರಿಕರಿಗೆ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಭಾರತ ಸರ್ಕಾರವು 2 ಲಕ್ಷ ರೂಪಾಯಿ ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಎಲ್ಲಾ ಭಾರತೀಯ ನಾಗರಿಕರು PMJJBYಯಿಂದ ರಕ್ಷಣೆ ಪಡೆಯಬಹುದು. 56 ಲಕ್ಷ ರೈತರಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಮಾಡಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಅಡಿಕೆ ಬೆಳೆಗಾರರಿಗೆ ನೆರವು

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕೃಷಿಕರು ಅಡಿಕೆ ಬೆಳೆಯನ್ನು ಅವಲಂಬಿಸಿದ್ದು, ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇತ್ತಿಚಿನ ವರ್ಷಗಳಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಬವಣೆ ತಪ್ಪಿಸಲು ಸಿಎಂ ಬೊಮ್ಮಾಯಿ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರ ಕಣ್ಣೀರೊರೆಸಲು ಪ್ರಯತ್ನ ಮಾಡಿರುವ ಅವರು, ಅಡಿಕೆ ಕೃಷಿಗೆ ಬಾಧಿಸಿರುವ ರೋಗಗಳಿಗೆ ಪರಿಹಾರ ಹುಡುಕಲು ಅನುದಾನ ಘೋಷಿಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರಹೊಸ ರೋಗಗಳನ್ನು ಅಡಿಕೆ ಕೃಷಿ ಎದುರಿಸುತ್ತಿದ್ದು, ಹೀಗಾಗಿ ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಉತ್ಪಾದಕತೆ ಹೆಚ್ಚಿಸುವ ಅಗತ್ಯತೆಯನ್ನು ಮನಗಂಡು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂಪಾಯಿ ನೆರವನ್ನು ಘೋಷಿಸಿದ್ದಾರೆ.

ಅತ್ಯಾಧುನಿಕ ಕೃಷಿ ಯಂತ್ರೋಪಕರ

ರೈತರಿಗೆ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಸುಲಭವಾಗಿ ದೊರೆಯುವಂತೆ ಮಾಡಲು ಕೃಷಿ ಇಲಾಖೆಯು ಈಗಾಗಲೇ ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ 11 ಹಾರ್ವೆಸ್ಟರ್‌ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್‌ಗಳಿಗೆ ತಲಾ 50 ಲಕ್ಷ ರೂಪಾಯಿಯಂತೆ, ಈ ವರ್ಷ 50 ಕೋಟಿ ರೂಪಾಯಿ ಒದಗಿಸಲಾಗುವುದು.

ಮೀನುಗಾರಿಕೆ ಅನುದಾನ

ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕೃತಕ ಬಂಡೆ ಸಾಲು ನಿರ್ಮಾಣ, ದೋಣಿಗಳಿಗೆ ಪೆಟ್ರೋಲ್ ಆಧಾರಿತ ಮೋಟರ್ ಇಂಜಿನ್ ಅಳವಡಿಕೆಗೆ 50 ಸಾವಿರ ರೂಪಾಯಿ ಸಹಾಯಧನ ಹಾಗೂ 40 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿ 2 ಲಕ್ಷ ಕಿಲೋ ಲೀಟರ್‌ಗೆ ಏರಿಕೆ ಮಾಡಲಾಗಿದೆ. ಹಾವೇರಿಯಲ್ಲಿ ಮೀನುಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರ ಸ್ಥಾಪನೆ. ಉತ್ತಮ ತಳಿ ಬಿತ್ತನೆ ಮೀನುಮರಿ ದಾಸ್ತಾನಿಗೆ ಪ್ರೋತ್ಸಾಹ. ಮೀನುಮರಿ ಉತ್ಪಾದನೆಗಾಗಿ 20 ಕೋಟಿ ರೂಪಾಯಿ ಅನುದಾನ. 10 ಸಾವಿರ ಮೀನುಗಾರರಿಗೆ ವಸತಿ ಸೌಲಭ್ಯ. ದೋಣಿ ಸುರಕ್ಷತೆಗಾಗಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಗೆ 17 ಕೋಟಿ ರೂಪಾಯಿ ಅನುದಾನ. ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ. ಬೈಂದೂರಿನ ಕಂಬದಕೋಣೆಯಲ್ಲಿ ಸೀ ಫಡ್ ಪಾರ್ಕ್ ಸ್ಥಾಪನೆ. ಮೀನು ಉತ್ಪನ್ನಗಳ ಪೂರೈಕೆಗಾಗಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ ವಿತರಣೆಗೆ ಯೋಜನೆಗಳನ್ನು ಘೋಷಿಸಲಾಗಿದೆ.

ಹೈನುಗಾರಿಕೆ ಮತ್ತು ಪಶುಸಂಗೋಪನೆ

ಬಳ್ಳಾರಿಯಲ್ಲಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಮೆಗಾಡೈರಿ ಸ್ಥಾಪನೆ. ಇದಕ್ಕಾಗಿ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬೀದಿನಾಯಿ ದತ್ತು ಪಡೆಯಲು ಆನ್‌ಲೈನ್ ವೇದಿಕೆ, ಮುಧೋಳ ಹೌಂಡ್ ತಳಿಯ ನಾಯಿಗಳ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿ ಬೆಂಗಳೂರಿನಲ್ಲಿ ಪ್ರಾಣಿಗಳ ಸಂಚಾರಿ ಚಿಕಿತ್ಸಾಲಯ ಸ್ಥಾಪನೆ ಮತ್ತು ಇತರ ಪ್ರಾಣಿ ಕಲ್ಯಾಣ ಮಂಡಳಿ ಚಟುವಟಿಕೆಗಳಿಗೆ 5 ಕೋಟಿ ರೂಪಾಯಿ ಕೊಡುಗೆ, ಜತೆಗೆ ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ ಹಾಗೂ ಬೆಂಗಳೂರು ಮತ್ತು ಹಾವೇರಿಯಲ್ಲಿ ಹೂವಿನ ಅತ್ಯಾಧುನಿಕ ಚಿಲ್ಲರೆ ಮಾರುಕಟ್ಟೆ ನಿರ್ಮಾಣಕ್ಕಾಗಿ ಅನುದಾನ ಘೋಷಣೆಯಾಗಿದೆ.

ತೋಟಗಾರಿಕೆಗೆ ಅನುದಾನ

ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆಗೆ ಸರಕಾರ ನಿರ್ಧರಿಸಿದೆ. ದ್ರಾಕ್ಷಿ ಬೆಳಗಾರರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿ ಮುಖಾಂತರ 100 ಕೋಟಿ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ರೇಷ್ಮೆ ಬೆಳೆಯನ್ನು 10,000 ಎಕರೆಯಷ್ಟು ಪ್ರದೇಶಕ್ಕೆ ವಿಸ್ತರಿಸಲು ತೀರ್ಮಾನಿಸಿದ್ದು, ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆ ಅಡಿ 75 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. 32 ಸ್ವಯಂ ಚಾಲಿತ ರೈಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ಹಾಗೂ ಸಾವಿರ ರೇಷ್ಮೆ ಬೆಳೆಗಾರರಿಗೆ ಶ್ರೆಡ್ಡರ‍್ಸ್‌ಗಳನ್ನು ಒದಗಿಸಲು 12 ಕೋಟಿ ರೂಪಾಯಿ ನೆರವು ನೀಡಲಾಗುವುದು. ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲು 8 ಕೋಟಿ ರೂಪಾಯಿ ಅನುದಾನ, ರಾಜ್ಯದ ೧೦ ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಡ್ರೈಯರ್ ಅಳವಡಿಸಲು 5 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಡಿಜಿಟಲ್ ಕೃಷಿ

ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಹೊಸ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಿಂದ ದೊರಕುವ ಮಾಹಿತಿಗಳನ್ನು ಉಪಯೋಗಿಸಿ, Precision Farming ಸೇರಿದಂತೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ತಿಳಿವಳಿಕೆಯುಳ್ಳ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ.

ನೈಸರ್ಗಿಕ ಕೃಷಿಗೆ

ಒತ್ತು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ರಾಜ್ಯದ ಐದು ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ತಲಾ 1,000 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಮಾಡಲು ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಬಜೆಟ್‌ನಲ್ಲಿ ಘೋಷಣೆಯಾದ ನೈಸರ್ಗಿಕ ಕೃಷಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇದೀಗ ಸರಕಾರ ಮುಂದಾಗಿದೆ. ಈಗಾಗಲೇ ರಾಜ್ಯದ ಐದು ಕೃಷಿ/ತೋಟಗಾರಿಕೆ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ತಲಾ 1,000 ಹೆಕ್ಟೇರ್‌ನಂತೆ ಒಟ್ಟು 5,000 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ ರೈತರನ್ನು ಮನವೊಲಿಸುವ ಮೂಲಕ ಸುಸ್ಥಿರ ಪರಿಸರ ಕೃಷಿಗೆ
ಅವಲಂಬಿಸುವ ರೈತರಿಗೆ ಪ್ರತಿ ಎಕರೆಗೆ 7,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದನ್ನು ಕ್ರಮೇಣ ಹೆಚ್ಚಿಸುವ ಚಿಂತನೆಯೂ ಸರಕಾರಕ್ಕಿದೆ.

LEAVE A RESPONSE

Your email address will not be published. Required fields are marked *