ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಕೊರೋನಾ ಮಹಾಮಾರಿಯು ಆಘಾತ ನೀಡಿದ್ದು, 14 ಸಿಬ್ಬಂದಿಗೆ ಕೋವಿಡ್ ವಕ್ಕರಿಸಿಕೊಂಡಿದೆ.
ಐಪಿಎಲ್ ಪ್ರಸಾರದ ಹೊಣೆ ಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್ನ ಸಿಬ್ಬಂದಿಯ ತಂಡ ಈಗಾಗಲೇ ಸಿದ್ಧತೆ ಆರಂಭಿಸಿದೆ. ಮುಂಬೈನಲ್ಲಿ ಬೀಡುಬಿಟ್ಟಿರುವ ತಂಡದ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದಾಗ 14 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕ್ಯಾಮೆರಾಮನ್ಗಳು, ನಿರ್ಮಾಪಕರು, ನಿರ್ದೇಶಕರು, ಇವಿಎಸ್ ಆಪರೇಟರ್ಗಳು ಹಾಗೂ ವಿಡಿಯೋ ಎಡಿಟರ್ಗಳಿಗೆ ಕೋವಿಡ್ ದೃಢಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಅಧಿಕಾರಿಗಳು, “ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಅಂಟುವುದನ್ನು ತಡೆಯುವುದರ ಜೊತೆಗೆ ಪಾಸಿಟಿವ್ ಬಂದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರೂ ಕೂಡ ಐಪಿಎಲ್ ರದ್ದಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. “ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುರಕ್ಷಿತವಾಗಿ ಐಪಿಎಲ್ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಲ್ಲಿ ಬದಲಾವಣೆ ತರುವ ಯೋಚನೆಯಿಲ್ಲ. ಅಗತ್ಯವಿದ್ದರೆ ಆರೋಗ್ಯ ಸಚಿವಾಲಯದ ಜೊತೆಗೂ ಈ ಬಗ್ಗೆ ಚರ್ಚಿಸುತ್ತೇವೆ” ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್ನ ಮೊದಲ ಪಂದ್ಯವು ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವೆ ಚೆನ್ನೈನಲ್ಲಿ ನಡೆಯಲಿದೆ.
More Stories
IPL NEWS | ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್: ಮೊದಲ ಪಂದ್ಯದ ವಿಜಯ ಮಾಲೆ ಯಾರಿಗೆ..? ಸಂಪೂರ್ಣ ಮಾಹಿತಿ ಇಲ್ಲಿದೆ..!