July 25, 2021

IPL NEWS | ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್: ಮೊದಲ ಪಂದ್ಯದ ವಿಜಯ ಮಾಲೆ ಯಾರಿಗೆ..? ಸಂಪೂರ್ಣ ಮಾಹಿತಿ ಇಲ್ಲಿದೆ..!

ಚೆನ್ನೈ- ಇಂದು ಐಪಿಎಲ್‌ ಮೊದಲ ಮ್ಯಾಚ್‌ ನಡೆಯಲಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್‌ (MI) ತಂಡಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೆಣೆಸಾಡಲಿವೆ. ಪಿಚ್‌ ಹೇಗಿದೆ? ಯಾವ್ಯಾವ ತಂಡದಲ್ಲಿ ಯಾರ್ಯಾರಿದ್ದಾರೆ? ಯಾರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಹುದು ಎಲ್ಲವನ್ನೂ ಒಂದೊಂದಾಗಿ ನೋಡೋಣ ಬನ್ನಿ.

ಪಿಚ್‌ ಹೇಗಿದೆ..?

ಚಿದಂಬರಂ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಪಂದ್ಯಗಳನ್ನು ಗಮನಿಸಿದರೆ, ಬ್ಯಾಟಿಂಗ್‌ಗೆ ಇದು ಯೋಗ್ಯವಲ್ಲ ಎಂದು ಸ್ಪಷ್ಟವಾಗುತ್ತದೆ. ಬೌಲರ್‌ಗಳಿಗೆ ಅನುಕೂಲಕರವಾದ ವಾತಾವರಣವಿದೆ. ಅದರಲ್ಲೂ ಸ್ಪಿನ್ನರ್‌ಗಳಿಗೆ ಈ ಪಿಚ್‌ ಹೆಚ್ಚು ಸೂಕ್ತ. ಆದ್ದರಿಂದ ಯಾರೇ ಮೊದಲು ಬ್ಯಾಟಿಂಗ್‌ ಮಾಡಿದರೂ ಹೆಚ್ಚೆಂದರೆ 150 ರನ್‌ ತಲುಪಬಹುದು ಎಂದು ಊಹಿಸಬಹುದು.

ಹೀಗಿರುತ್ತೆ ಪ್ಲೇಯಿಂಗ್‌ 11:

RCB:
ವಿರಾಟ್‌ ಕೊಹ್ಲಿ (ನಾಯಕ), ದೇವದತ್‌ ಪಡಿಕ್ಕಲ್‌, ಎಬಿ ಡಿವಿಲಿಯರ್ಸ್‌ (ವಿಕೇಟ್‌ ಕೀಪರ್‌), ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪತ್ತಿದಾರ್‌ / ಮೊಹಮದ್‌ ಅಜರುದ್ದೀನ್‌, ಸಚಿನ್‌ ಬೆಬಿ / ಸುಯೇಶ್‌ ಪ್ರಭುದೇಸಾಯಿ, ಡೇನಿಯಲ್‌ ಕ್ರಿಶ್ಚಿಯನ್‌, ವಾಷಿಂಗ್ಟನ್‌ ಸುಂದರ್‌, ಕೈಲ್‌ ಜೇಮಿಸನ್‌ / ಕೇನ್‌ ರಿಚರ್ಡ್‌ಸನ್‌, ಮೊಹಮದ್‌ ಸಿರಾಜ್‌, ಯುಜುವೇಂದ್ರ ಚಹಲ್‌.

MI:
ರೋಹಿತ್‌ ಶರ್ಮ (ನಾಯಕ), ಕ್ರಿಸ್‌ ಲೀನ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ (ವಿಕೇಟ್‌ ಕೀಪರ್‌), ಕೈರೋನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ನೇತನ್‌ ಕೌಲ್ಟರ್‌ ನೈಲ್‌/ಪಿಯೂಶ್‌ ಚಾವ್ಲಾ, ರಾಹುಲ್‌ ಚಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರಿತ್‌ ಬುಮ್ರಾ.

ಬೆಸ್ಟ್‌ ಬ್ಯಾಟ್ಸ್‌ಮನ್‌ ಯಾರು?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್‌ ಕೊಹ್ಲಿ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಹುದು. ಎಂತಹದ್ದೇ ಸರಣಿಯಾಗಿದ್ದರೂ ಕೊಹ್ಲಿ ಬ್ಯಾಟ್‌ ಹಿಡಿದು ಚಮತ್ಕಾರ ಮಾಡುವುದು ಇತ್ತೀಚೆಗೆ ಸಾಮನ್ಯವಾಗಿದೆ. ಇಂಗ್ಲೆಂಡ್‌ ವಿರುದ್ಧ ಮಾರ್ಚ್‌ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 52 ಎಸೆತಕ್ಕೆ 80 ರನ್‌ ಬಾರಿಸಿದ್ದರು. ಇಂಗ್ಲೆಂಡ್‌ ತಂಡವು ಬಲಿಷ್ಠ ಬೌಲರ್‌ಗಳು ಹೊಂದಿದ್ದರೂ ಕೊಹ್ಲಿಯ ಆರ್ಭಟಕ್ಕೆ ಅಡ್ಡಿಪಡಿಸಲಾಗಿರಲಿಲ್ಲ. ಅದೇ ಸರಣಿಯಲ್ಲಿ ಮೂರು ಅರ್ಧ ಶತಕವನ್ನು ಕೊಹ್ಲಿ ಸಿಡಿಸಿದ್ದರು.

ಇನ್ನು ಮುಂಬೈ ಇಂಡಿಯನ್ಸ್‌ (MI) ತಂಡದ ಬ್ಯಾಟ್‌ಮನ್‌ಗಳ ಪೈಕಿ ರೋಹಿತ್‌ ಶರ್ಮ ಹೆಚ್ಚು ರನ್‌ ಹೊಡೆಯುವ ಸಾಧ್ಯತೆಯಿದೆ. ಕೆಲವು ಪಂದ್ಯಗಳಲ್ಲಿ ಶರ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದರೂ, ಅವರೊಬ್ಬ ಅಸಾಮಾನ್ಯ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಇಂಗ್ಲೆಂಡ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೇವಲ 34 ಬಾಲ್‌ಗೆ 64 ರನ್‌ ಸಿಡಿಸಿದ್ದರು. ಕೊನೆಯ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ರೋಹಿತ್‌ ಶರ್ಮ 60ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಇವರ ಜೊತೆಗೆ ಸೂರ್ಯಕುಮಾರ ಯಾದವ್ ಮೇಲೆ ನಂಬಿಕೆ ಇಡಬಹುದು.

ಬೆಸ್ಟ್‌ ಬೌಲರ್‌ ಯಾರು?

ಮುಂಬೈ ಇಂಡಿಯನ್ಸ್‌ ತಂಡದಲ್ಲಿರುವ ಜಸ್‌ಪ್ರಿತ್‌ ಬುಮ್ರಾ ತುಂಬಾ ದಿನಗಳ ನಂತರ ಟಿ20 ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ. ತಾವು ಆಡಿದ ಕೊನೆಯ ನಾಲ್ಕು ಟಿ20 ಪಂದ್ಯಗಳಲ್ಲಿ ಬರೋಬ್ಬರಿ 10 ವಿಕೇಟ್‌ ಬುಮ್ರಾ ಉರುಳಿಸಿದ್ದರು.
ಇನ್ನು ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಯುಜುವೇಂದ್ರ ಚಹಲ್‌ ಕೂಡ ಸಾಮಾನ್ಯ ಬೌಲರ್‌ ಅಲ್ಲ. ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡದಿದ್ದರೂ, ಈವರೆಗಿನ ಐಪಿಎಲ್‌ ಪಂದ್ಯಗಳಲ್ಲಿ ಮುಂಬೈ ವಿರುದ್ಧ ಅತಿಹೆಚ್ಚು ವಿಕೆಟ್‌ ಪಡೆದ ಕೀರ್ತಿ ಇವರದ್ದು. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಬೇರೆಲ್ಲ ಕ್ರೀಡಾಂಗಣಗಳಿಗಿಂತ ಚೆನ್ನೈನ ಈ ಕ್ರೀಡಾಂಗಣದಲ್ಲಿ ಚಹಲ್‌ ಚೆನ್ನಾಗಿ ಆಟವಾಡಿರುವುದು ಚಹಲ್‌ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಬೆಸ್ಟ್‌ ಆಲ್‌ ರೌಂಡರ್‌ ಯಾರು?

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶಿಸಿದ್ದರು ಹಾರ್ದಿಕ್‌ ಪಾಂಡ್ಯ. ಕೊನೆಯ ಎರಡು ಪಂದ್ಯಗಳಲ್ಲಿ ೨ ವಿಕೆಟ್‌ ಪಡೆದಿದ್ದರು. ಜೊತೆಗೆ, ಎರಡೂ ಪಂದ್ಯಗಳಲ್ಲಿ 30+ ಗಳಿಸಿದ್ದರು. ಎಂಐನ ಅತ್ಯುತ್ತಮ ಆಲ್‌ರೌಂಡರ್‌ ಆಗಿ ಪಾಂಡ್ಯ ಮಿಂಚುವ ನಿರೀಕ್ಷೆಯಿದೆ.
ಇನ್ನು 2020ರ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈಗ ಹಿಂದಿನಂತಿಲ್ಲ. 2021ರಲ್ಲಿ ಅವರ ಆಟದ ರೀತಿಯೇ ಬದಲಾಗಿದೆ. ಇತ್ತೀಚೆಗೆ ಕಳೆದ ತಿಂಗಳು ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೂರು ಪಂದ್ಯದಲ್ಲಿ 89 ರನ್‌ ಹೊಡೆಯುವುದರ ಜೊತೆಗೆ 2 ವಿಕೆಟ್‌ ಪಡೆದಿದ್ದರು. ಆದ್ದರಿಂದ ಮ್ಯಾಕ್ಸ್‌ವೆಲ್‌ ಮೇಲೆಯೂ ಸಾಕಷ್ಟು ಕುತೂಹಲವಿದೆ.

Share this News
error: Content is protected !!