May 19, 2021

ಏನಿದು ೬ನೇ ವೇತನ‌ ಆಯೋಗ..? ಸಾರಿಗೆ ನೌಕರರು ಹಠ ಹಿಡಿದು ಮುಷ್ಕರ ನಡೆಸುತ್ತಿರೋದ್ಯಾಕೆ..? ಇಲ್ಲಿದೆ ಕಂಪ್ಲೀಟ್ ಕಹಾನಿ..!

ಬೆಂಗಳೂರು- ಒಂದುಕಡೆ ಆರನೇ ವೇತನ ಆಯೋಗದ ಶಿಫಾರಸನ್ನು ತಮಗೂ ಜಾರಿಗೊಳಿಸಬೇಕೆಂದು ಸಾರಿಗೆ ನೌಕರರು ಪಟ್ಟುಹಿಡಿದು ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ನೌಕರರ ಬೇಡಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ಈ ಕಿತ್ತಾಟದಲ್ಲಿ ನಿಜಕ್ಕೂ ತೊಂದರೆ ಅನುಭವಿಸುತ್ತಿರುವವರು ಸಾಮಾನ್ಯ ಪ್ರಯಾಣಿಕರು. ಹಾಗಾದರೆ ವೇತನ ಆಯೋಗದ ಶಿಫಾರಸಿನಲ್ಲಿ ಅಂಥದ್ದೇನಿದೆ? ನೋಡೋಣ ಬನ್ನಿ.

ಏನಿದು ವೇತನ ಆಯೋಗ..?

ಸರ್ಕಾರಿ ನೌಕರರ ಸಂಬಳ ಹಾಗೂ ಇತರೆ ಸೌಲಭ್ಯಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲು ಸರ್ಕಾರವು ವೇತನ ಆಯೋಗವನ್ನು ರಚಿಸುತ್ತದೆ. ಕೇಂದ್ರ ಸರ್ಕಾರದ ನೌಕರರಿಗೆ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ವೇತನ ಆಯೋಗಗಳು ಪ್ರತ್ಯೇಕವಾಗಿ ರಚಿಸಲ್ಪಡುತ್ತದೆ. ಆಯೋಗವು ವಿವಿಧ ನೌಕರರ ಅಗತ್ಯಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸು ನೀಡುತ್ತದೆ.

ಕರ್ನಾಟಕದಲ್ಲಿ ಮೊದಲ ವೇತನ ಆಯೋಗವನ್ನು 1966ರಲ್ಲಿ ನ್ಯಾ. ಟಿ.ಕೆ.ತುಕೋಳ್‌ ನೇತೃತ್ವದಲ್ಲಿ ರಚಿಸಲಾಯಿತು. ನಂತರ ನಿವೃತ್ತ ಐಪಿಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ 2017ರಲ್ಲಿ ಆರನೇ ವೇತನ ಆಯೋಗವನ್ನು ರಚಿಸಿತು. ವೇತನ ಪರಿಷ್ಕರಣೆಗೆ ಸಂಬಂಧಿಸಿ ಈ ಆಯೋಗವು ಮಹತ್ವದ ಶಿಫಾರಸುಗಳನ್ನು ನೀಡಿದ್ದು, ಅವುಗಳು ಸಾರಿಗೆ ನೌಕರರಿಗೂ ಅನ್ವಯಿಸಬೇಕೆಂಬುದು ಈಗ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕಕರ ಪ್ರಮುಖ ಬೇಡಿಕೆಯಾಗಿದೆ.

ಸಾರಿಗೆ ನೌಕರರ ವಾದವೇನು..?
ರಾಜ್ಯ ಸರ್ಕಾರದ ಅಧೀನದಲ್ಲಿ ಒಟ್ಟು 72 ನಿಗಮಗಳಿವೆ. ಅವುಗಳಲ್ಲಿ 70 ನಿಗಮಗಳಿಗೆ ಸರ್ಕಾರವು ಈಗಾಗಲೇ ಆರನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ನೀಡುತ್ತಿದೆ. ಸಾರಿಗೆ ಸಂಸ್ಥೆಗಳಾದ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಯನ್ನು ಮಾತ್ರ ಇದರಿಂದ ಹೊರಗಿಡಲಾಗಿದೆ. “ನಾವೂ ಕೂಡ ಸರ್ಕಾರಿ ನೌಕರರು. ನಾವೂ ಕೂಡ ಸರ್ಕಾರ ಹಾಗೂ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದೇವೆ. ನಮಗೂ ಆ ಶಿಫಾರಸ್ಸುಗಳು ಅನ್ವಯವಾಗಬೇಕು” ಎಂಬುದು ಸಾರಿಕೆ ನೌಕರರ ಬೇಡಿಕೆ.

ಸರ್ಕಾರದ ವಾದವೇನು..?

ಆರನೇ ವೇತನ ಆಯೋಗದ ಶಿಫಾರಸಿನಂತೆ ಸಾರಿಗೆ ನೌಕರರಿಗೆ ಸಂಬಳ ನೀಡಲು ಸಾಧ್ಯವೇ ಇಲ್ಲವೆಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. “ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಆಯೋಗದ ಶಿಫಾರಸನ್ನು ಸಾರಿಗೆ ನೌಕರರಿಗೆ ಅನ್ವಯಿಸಿದರೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಅದರ ಬದಲು ಸಂಬಳವನ್ನು ಶೇ. 8ರಷ್ಟು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ಕೋವಿಡ್‌-19ನಿಂದಾಗಿ ಸಾರ್ವಜನಿಕರು ಮತ್ತು ಸರ್ಕಾರ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ನೌಕರರು ಮುಷ್ಕರ ಮಾಡುವುದು ಸರಿಯಲ್ಲ” ಎಂಬುದು ರಾಜ್ಯ ಸರ್ಕಾರದ ವಾದ.

ಡಿಸಿಎಂ ಹೇಳೋದೊಂದು.. ಸಿಎಂ ಹೇಳೋದೊಂದು.!

“ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ಆರನೇ ವೇತನ ಆಯೋಗದ ಜಾರಿಗೆ ರಾಜ್ಯ ಸರ್ಕಾರ ಸಿದ್ಧವಿದೆ. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕೆಲವೇ ದಿನಗಳಲ್ಲಿ ಇದನ್ನು ಜಾರಿಗೆ ತರುತ್ತೇವೆ” ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾರ್ಚ್‌ನಲ್ಲಿ ಹೇಳಿದ್ದರು. ಸವದಿಯವರ ಈ ಹೇಳಿಕೆಯು ಸಾರಿಗೆ ನೌಕರರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ ಈಗ ಸರ್ಕಾರ ಉಲ್ಟಾ ಹೊಡೆದಿದ್ದು, ಆಯೋಗದ ಶಿಫಾರಸ್ಸು ಜಾರಿ ಅಸಾಧ್ಯವೆಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ.

6ನೇ ವೇತನ ಆಯೋಗದಿಂದ ಸಾರಿಗೆ ನೌಕರರಿಗೇನು ಲಾಭ?

ಒಂದುವೇಳೆ ಸಾರಿಗೆ ನೌಕರರು ಆರನೇ ವೇತನ ಆಯೋಗದ ಶಿಫಾರಸುಗಳಿಗೆ ಒಳಪಟ್ಟರೆ, ಮೂಲ ವೇತನ ಹಾಗೂ ಪಿಂಚಣಿ ಶೇ. 30ರಷ್ಟು ಏರಿಕೆಯಾಗಲಿದೆ. ಮೂಲ ವೇತನವು ಏರಿಕೆಯಾದರೆ ತುಟ್ಟಿ ಭತ್ಯೆ ಹಾಗೂ ಮಬೆಬಾಡಿಗೆ ಭತ್ಯೆ ಕೂಡ ಹೆಚ್ಚಾಗಲಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!