July 25, 2021

ಕೆ.ಎಸ್.ಈಶ್ವರಪ್ಪ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಮುಖಂಡರುಗಳ ಮಸಾಜ್‌ ಸ್ಪೆಷಲಿಸ್ಟ್, ಈ ಈಶ್ವರಪ್ಪ: ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲೊಬ್ಬ ಅದ್ಭುತ ನಾಟಿ ನರತಜ್ಞ..!

ಹಾವೇರಿ- ದೊಡ್ಡದೊಡ್ಡ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಲು ರೋಗಿಗಳಿಂದ ಪಡೆಯುವುದು ಲಕ್ಷಗಟ್ಟಲೆ ಹಣ. ಆದರೂ ಕೆಲವೊಮ್ಮೆ ಕಾಯಿಲೆ ಮಾತ್ರ ದೂರವಾಗುವುದಿಲ್ಲ. ರೋಗಿಯು ಹಣವನ್ನೂ ಕಳೆದುಕೊಂಡು, ಕಾಯಿಲೆಯೂ ಗುಣವಾಗದೇ ಪರದಾಡಬೇಕಾಗುತ್ತದೆ. ವೈದ್ಯಕೀಯ ಸೇವೆಯು ದಂಧೆಯಾಗಿರುವ ಈ ಕಾಲದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ನಾಟಿ ವೈದ್ಯರೊಬ್ಬರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಚಿಕಿತ್ಸೆ ನೀಡಿ ಮಾದರಿಯಾಗುತ್ತಿದ್ದಾರೆ. ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರ ಪಟ್ಟಿಯಲ್ಲಿ ಸಾಮಾನ್ಯ ಜನರಷ್ಟೇ ಅಲ್ಲದೇ ಗಣ್ಯ ವ್ಯಕ್ತಿಗಳ ದಂಡೇ ಇದೆ.

ನಾವು ಪರಿಚಯಿಸುತ್ತಿರುವ ಈ ನಾಟಿ ವೈದ್ಯರ ಹೆಸರು ಈಶ್ವರಪ್ಪ ಹಡಪದ. ವಯಸ್ಸು ಅರವತ್ತರ ಆಸುಪಾಸು. ಶಿಗ್ಗಾಂವ ತಾಲೂಕಿನ ಕಡಹಳ್ಳಿ ಸಮೀಪದ ನೀರಲಗಿ ಗ್ರಾಮದಲ್ಲಿ, ಅಂದರೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಅಂಬುಜಾ ಕಾರ್ಖಾನೆ ಸಮೀಪದ ಪುಟ್ಟ ಮನೆಯಲ್ಲಿ ವಾಸ. ತಾನೂ ನಗುತ್ತಾ, ಇತರರನ್ನೂ ನಗಿಸುತ್ತಾ ಸಂತೋಷ ಪಡುವ ಹಸನ್ಮುಖಿ. ವೈದ್ಯಲೋಕಕ್ಕೆ ಸವಾಲಾಗಿರುವ ನರಗಳನ್ನೂ ಸಡಿಲಗೊಳಿಸಿ ಚಿಕಿತ್ಸೆ ನೀಡುವುದರಲ್ಲಿ ನಿಸ್ಸೀಮ.

ಈಶ್ವರಪ್ಪ ಹಡಪದರವರ ತಂದೆ ವೀರಭದ್ರಪ್ಪರವರು ಸ್ನಾಯು ಸೆಳೆತ, ಬೆನ್ನು ನೋವು, ಮೂಳೆ ಬಾಧೆಗೆ ವಿಶೇಷವಾದ ಚಿಕಿತ್ಸೆ ನೀಡುತ್ತಿದ್ದರು. ಗರ್ಭಿಣಿಯರು ಹಾಗೂ ವೃದ್ಧರಿಗೆ ನರಕ್ಕೆ ಸಂಬಂಧಿಸಿದ ತೊಡಕುಗಳನ್ನು ನಿವಾರಿಸುತ್ತಿದ್ದರು. ಹೀಗೆ ನಾಟಿ ವೈದ್ಯರಾಗಿ ಜನರ ಸೇವೆ ಮಾಡುತ್ತಿದ್ದ ವೀರಭದ್ರಪ್ಪರವರಿಗೆ ಇದ್ದಕಿದ್ದಂತೆ ಧಮ್ಮು ಶುರುವಾಯಿತು. ಆಗ ಅವರ ಕಷ್ಟಕ್ಕೆ ನೆರವಾಗಿದ್ದು ಹದಿಹರೆಯದ ವಯಸ್ಸಿನ ಈಶ್ವರಪ್ಪ ಹಡಪದ. ತಂದೆಯ ಸೇವೆ ಮಾಡುತ್ತಾ, ಅವರಿಂದ ಚಿಕಿತ್ಸೆಯ ಪಟ್ಟುಗಳನ್ನು ಕಲಿತ ಈಶ್ವರಪ್ಪ ಜೀವನದುದ್ದಕ್ಕೂ ಮಾಡಿದ ಒಂದೊಂದು ಕಾರ್ಯಗಳೂ ಬೆರಗಾಗಿಸುವಂತಹದ್ದು.

ಹಿರೇಮಣಕಟ್ಟಿಯ ನಿಕಟಪೂರ್ವ ಶ್ರೀಗಳಾದ ವೀರಭದ್ರಾರೂಢರಿಂದ ಹಿಡಿದು ಪಂಚಪೀಠದ ಎಲ್ಲ ಜಗದ್ಗುರಗಳ ನರಗಳನ್ನು ಸಡಿಲಗೊಳಿಸಿದ ಕೀರ್ತಿ ಈ ಈಶ್ವರಪ್ಪರವರದ್ದು. ಕಾಶಿ ಶ್ರೀಗಳು ಇವರನ್ನು ಮೂರು ಬಾರಿ ಕಾಶಿಗೆ ಕರೆಸಿ ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಈಗೇನಾದರೂ ಕೊರೋನಾ ಇಲ್ಲದಿದ್ದರೆ, ಕಾಶಿ ಶ್ರೀಗಳಿಂದ ನಾಲ್ಕನೇ ಬಾರಿ ಬಂದ ಆಹ್ವಾನವನ್ನೂ ಸ್ವೀಕರಿಸಿ ಚಿಕಿತ್ಸೆ ನೀಡುತ್ತಿದ್ದರು. ಮಠಾಧೀಶರಷ್ಟೇ ಅಲ್ಲದೇ, ಡಿ.ಕೆ. ಶಿವಕುಮಾರ್, ಕೆ.ಬಿ. ಕೋಳಿವಾಡ, ಚನ್ನಿಗಪ್ಪ, ಮೋಟಮ್ಮ, ಬಿ.ಎಂ.ಮೆಣಸಿನಕಾಯಿ, ಮಂಜುನಾಥ ಕುನ್ನೂರ ಮುಂತಾದ ರಾಜಕಾರಣಿಗಳ ನೋವನ್ನೂ ಗುಣಪಡಿಸಿದ್ದಾರೆ.

ಸಾಸಿವೆ ಅಥವಾ ಔಡಲ ಎಣ್ಣೆ, ದೇಸಿ ಕರ್ಪೂರ, ಬೆಳ್ಳುಳ್ಳಿ, ಅಮೃತ ಬಳ್ಳಿ ಮುಂತಾದ ಔಷಧೀಯ ಗುಣವುಳ್ಳ ಪದಾರ್ಥಗಳೇ ಈಶ್ವರಪ್ಪರ ಒಡನಾಡಿಗಳು. ಇವುಗಳನ್ನು ಸರಿಯಾಗಿ ಬಳಸಿಕೊಂಡು ಮಸಾಜ್‌ ಮೂಲಕ ನರ ಸರಿಪಡಿಸಿ ನ್ಯೂರಾಲಜಿಸ್ಟ್‌ ಎನಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಜ್ಞಾನ, ಪರಿಣತಿ ಹೊಂದಿರುವ ಈಶ್ವರಪ್ಪನವರು ಎಂದೂ ರೋಗಿಯ ದುಡ್ಡಿಗೆ ಆಸೆ ಪಟ್ಟವರಲ್ಲ. ತನ್ನಿಂದ ಚಿಕಿತ್ಸೆ ಪಡೆದವರು ಎಷ್ಟೇ ನೀಡಿದರೂ ಖುಷಿಯಿಂದ ಸ್ವೀಕರಿಸಿ ಸಂತೃಪ್ತರಾಗುತ್ತಾರೆ. ತನಗಿರುವ ಎರಡು ಎಕರೆ ಜಮೀನಿನಲ್ಲಿ ಕೃಷಿ ಕಾರ್ಯ ಮಾಡಿಕೊಂಡು, ತನ್ನ ನಾಲ್ಕು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಪತ್ನಿ ಯಲ್ಲವ್ವ ಕೂಡ ಈಶ್ವರಪ್ಪನವರಿಗೆ ಬೆನ್ನೆಲುಬಾಗಿ, ಜನರ ಸೇವೆಯಲ್ಲಿ ತೃಪ್ತಿ ಕಾಣುತ್ತಿದ್ದಾರೆ.

ಬೆನ್ನು ನೋವು, ಕುತ್ತಿಗೆ ನೋವು, ಕೈಕಾಲಿನ ನಿಶ್ಶಕ್ತಿ ಮುಂತಾದ ನರಕ್ಕೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದವರು 7411254774 ಅಥವಾ 8050439389 ನಂಬರಿಗೆ ಕರೆ ಮಾಡಿ ಈಶ್ವರಪ್ಪರವರನ್ನು ಸಂಪರ್ಕಿಸಬಹುದು. ಕಷ್ಟದಲ್ಲಿರುವ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಅವರನ್ನು ಪ್ರೋತ್ಸಾಹಿಸಬಹುದು.

Share this News
error: Content is protected !!