July 25, 2021

ಕೊರೋನಾ ಆತಂಕದ ನಡುವೆಯೂ ಅಗಡಿಯಲ್ಲಿ ಯುಗಾದಿಯಂದು ಸಂಭ್ರಮದ ಜಾತ್ರೆ: ಹೊಸ ವರ್ಷದ ಮೊದಲ ದಿನ ಪುನೀತರಾದ ವೀರಭದ್ರೇಶ್ವರ ದೇವರ ಭಕ್ತರು..!

ಹಾವೇರಿ- ತಾಲೂಕಿನ ಅಗಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಜಾತ್ರೆಯು ಪ್ರತಿವರ್ಷದಂತೆ ವಿಜೃಂಭಣೆಯಿಂದ ಜರುಗಿದ್ದು, ಅಸಂಖ್ಯಾತ ಭಕ್ತರು ಈ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸನ್ನರಾದರು.

ಹೊಸ ವರ್ಷದ ಮೊದಲ ದಿನವಾದ ಯುಗಾದಿಯಂದು ನಡೆದ ಈ ಜಾತ್ರೆಯಲ್ಲಿ ಸಂಭ್ರಮ, ಸಡಗರವು ಮುಗಿಲು ಮುಟ್ಟಿತ್ತು. ಅನೇಕ ಯುವಕರು ಅನ್ನ ಸಂತರ್ಪಣೆ ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಕೊರೊನಾ ಆತಂಕದ ನಡುವೆಯೂ ಬೃಹತ್‌ ಭಕ್ತವೃಂದಕ್ಕೆ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನ ಸಾಕ್ಷಿಯಾಯಿತು.

ಏಪ್ರಿಲ್‌ 12ರ ಸೋಮವಾರದಂದು ಬೆಳಗ್ಗೆ ಸೂರ್ಯೋದಯವಾಗುತ್ತಿದ್ದಂತೆ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಮಹಾರುದ್ರಾಭಿಷೇಕ, ಕಂಕಣಧಾರಣ ಸಹಸ್ರ ಬಿಲ್ವಾರ್ಚನೆ, ವಸ್ತ್ರಾಲಂಕಾರ ಸೇವೆಯ ಮೂಲಕ ಭಕ್ತರು ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾದರು. ಸಾಯಂಕಾಲ ನೆರವೇರಿದ ಪಲ್ಲಕ್ಕಿ ಉತ್ಸವ ಹಾಗೂ ಭಜನೆ ವಿಶೇಷವಾಗಿತ್ತು.

ಏಪ್ರಿಲ್‌ 13ರ ಮಂಗಳವಾರದಂದು ಬೆಳಗ್ಗೆ ಕಾಕಡಾರತಿ, ವಸ್ತ್ರಾಲಂಕಾರದ ಜೊತೆಗೆ ಬೆಳ್ಳಿಯ ಕಿರೀಟ ಹಾಗೂ ನಡುಪಟ್ಟಿಯನ್ನು ದೇವರಿಗೆ ಅರ್ಪಿಸಿ ಶೃಂಗರಿಸಲಾಯಿತು. ವೇ|| ಮೂ|| ಚನ್ನಬಸಯ್ಯ, ಪಂಚಯ್ಯ, ಹಿರೇಮಠರವರು ಅಗ್ನಿಪಟು ಮಾಡಿದರು.

ಸಡಗರದಿಂದ ಸಾಗಿದ ಗುಗ್ಗಳ:

ಬೆಳಗ್ಗೆ 8 ಗಂಟೆ ಸುಮಾರಿಗೆ ಶ್ರೀ ಪ್ರಭುಸ್ವಾಮಿ ಮಠದಿಂದ ಆರಂಭವಾದ ಪಲ್ಲಕ್ಕಿ ಹಾಗೂ ಗುಗ್ಗಳವು ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಅಗಡಿ, ಗುತ್ತಲ, ದೇವಗಿರಿ, ಮಡ್ಲೂರ ಗ್ರಾಮಗಳ ಪುರವಂತರ ಕುಣಿತವು ಉತ್ಸವದ ಮೆರಗನ್ನು ಹೆಚ್ಚಿಸಿತು. ಮೆರವಣಿಗೆಯುದ್ದಕ್ಕೂ ಪುರವಂತರಿಂದ ಪೌರಾಣಿಕ ಕಥೆಗಳು ಕೇಳಿಬಂದವು. ವೀರಭದ್ರ ಸ್ವಾಮಿಯ ಹಿರಿಯ ಸೇವಕರಾದ ವೀರಯ್ಯ ಬನ್ನಿಕೊಪ್ಪರವರ ಒಡುಪುಗಳು ಭಕ್ತರನ್ನು ರೋಮಾಂಚನಗೊಳಿಸಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪುರವಂತರು ಹಾಗೂ ಭಕ್ತರು ಅಗ್ನಿಕುಂಡವನ್ನು ಹಾಯುವುದರೊಂದಿಗೆ ಗುಗ್ಗಳ ಅಂತ್ಯವಾಯಿತು.

ಈರಪ್ಪ ಬ. ಬಳಲಕೊಪ್ಪದ ಸಂಪೂರ್ಣ ಗುಗ್ಗಳ ಸೇವೆಗೆ, ಚನ್ನಬಸಪ್ಪ ಫಕೀರಪ್ಲ ಕಡ್ಲಿಯವರ ಮಕ್ಕಳು ಮತ್ತು ಬಸವರಾಜ ಶಿವಪ್ಪ ಬಸೇಗಣ್ಣಿಯವರು ಎಲಿ ಪೂಜೆ ಹಾಗೂ ರುದ್ರಾಭಿಷೇಕ ಸೇವೆಗೆ ಆರ್ಥಿಕ ಕೊಡುಗೆ ನೀಡಿದರು. ಶೇಖರಯ್ಯ ನಿರ್ವಾಣಿಮಠರವರು ಡಬ್ಬಿ ಎಣ್ಣೆಯನ್ನು ಕಾಣಿಕೆಯಾಗಿ ನೀಡಿದರು. ವಿರೂಪಾಕ್ಷಪ್ಪ ಹೆಡಿಗ್ಗೊಂಡ, ಮಂಜುನಾಥ ಮಡಿವಾಳರ, ಪುಟ್ಟಪ್ಪ ದುಂಡಿ, ಪರಶುರಾಮ ಬೆನ್ನೂರ, ಪುಟ್ಟು ಕಾಮನಹಳ್ಳಿ, ಚಂದ್ರು ಈಳಿಗೇರರವರು ಅನ್ನಸಂತರ್ಪಣೆಯ ಸೇವಾರ್ಥಿಗಳಾಗಿದ್ದಾರೆ.

Share this News
error: Content is protected !!