May 19, 2021

‘ನಿಮಗೆ ಪುರುಸೊತ್ತಾದಾಗ ಆಮ್ಲಜನಕ ಪೂರೈಸಿದರೆ ಜನರು ಸಾಯುತ್ತಾರೆ ಅಷ್ಟೇ’ : ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೊರ್ಟ್ ಛೀಮಾರಿ..!

ನವದೆಹಲಿ: ದೆಹಲಿ ಮತ್ತು ಇತರೆಡೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ‌ ತರಾಟೆಗೆ ತೆಗೆದುಕೊಂಡಿದೆ. ‘ನಿಮಗೆ ಪುರುಸೊತ್ತಾದಾಗ ಆಮ್ಲಜನಕ ಪೂರೈಸಿದರೆ ಜನರು ಸಾಯುತ್ತಾರೆ ಅಷ್ಟೇ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿರುವ ದೆಹಲಿಯ ಆಸ್ಪತ್ರೆಗಳಿಗೆ ಯಾವುದೇ ಮಾರ್ಗದಲ್ಲಾದರೂ ಆಮ್ಲಜನಕ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

‘ಪರಿಸ್ಥಿತಿಯ ಗಂಭೀರತೆಯನ್ನು ಕೇಂದ್ರ ಏಕೆ ಅರಿತುಕೊಳ್ಳುತ್ತಿಲ್ಲ? ನಾವು ಆಘಾತಕ್ಕೊಳಗಾಗಿದ್ದೇವೆ. ಆಸ್ಪತ್ರೆಗಳು ಆಮ್ಲಜನಕ ಇಲ್ಲದೇ ಪರದಾಡುತ್ತಿರುವಾಗ ಉಕ್ಕಿನ ಸ್ಥಾವರಗಳು ಚಾಲನೆಯಲ್ಲಿವೆ’ ಎಂದು ಸರ್ಕಾರವನ್ನು ಹೈಕೋರ್ಟ್ ಹೇಳಿದೆ.

ಆಮ್ಲಜನಕ ಪೂರೈಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಹೆಗಲ ಮೇಲಿದೆ. ಅಗತ್ಯವಿದ್ದರೆ ಉಕ್ಕು ಮತ್ತು ಪೆಟ್ರೋಲಿಯಂ ಸೇರಿದಂತೆ ಕೈಗಾರಿಕೆಗಳಿಗೆ ನೀಡಲಾಗುತ್ತಿರುವ ಆಮ್ಲಜನಕದ ಪೂರೈಕೆ ತಡೆಹಿಡಿದು ಅದನ್ನು ವೈದ್ಯಕೀಯ ಬಳಕೆಗಾಗಿ ನೀಡಬಹುದು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನೇತೃತ್ವದ ನ್ಯಾಯಪೀಠ ಸೂಚಿಸಿತು.

‘ಟಾಟಾ ಸಂಸ್ಥೆಯು ಉಕ್ಕಿನ ಸ್ಥಾವರಗಳಿಗಾಗಿ ಉತ್ಪಾದಿಸುವ ಆಮ್ಲಜನಕವನ್ನು ವೈದ್ಯಕೀಯ ಬಳಕೆಗೆ ನೀಡಲು ಸಾಧ್ಯವಾದರೆ, ಇತರರಿಗೆ ಏಕೆ ಸಾಧ್ಯವಿಲ್ಲ? ಇದು ದುರಾಸೆಯ ಪರಮಾವಧಿ. ಮಾನವೀಯತೆಯ ಪ್ರಜ್ಞೆ ಉಳಿದಿಲ್ಲವೇ’ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!