July 25, 2021

ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!

ಹಾವೇರಿ:- ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಶಿಗ್ಗಾಂವ ಹಾಗೂ ಸವಣೂರು ತಾಲೂಕು ಆಸ್ಪತ್ರೆಗಳಿಗೆ ಗುರುವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಬೇಡಿಕೆಗಳ ಕುರಿತಂತೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ತಾಲೂಕಾ ಆಸ್ಪತ್ರೆಗಳಲ್ಲಿ ದಾಸ್ತಾನಿರುವ ಜಂಬೋ ಹಾಗೂ ಮಿನಿ ಆಕ್ಸಿಜನ್ ಸಿಲಿಂಡರ್‍ಗಳ ದಾಸ್ತಾನುಗಳು, ರೆಮ್‍ಡಿಸಿವರ್ , ಔಷಧಿಗಳ ದಾಸ್ತಾನು, ಐ.ಸಿ.ಯು ಘಟಕ, ವೆಂಟಿಲೇಟರ್ ವ್ಯವಸ್ಥೆ, ಆಕ್ಸಿಜನ್ ಪೂರೈಕೆ ವ್ಯವಸ್ಥೆ ಹಾಗೂ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ವ್ಯವಸ್ಥೆ ಕುರಿತಂತೆ ಖುದ್ದಾಗಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗಾಗಿ ಅನುಸರಿಸುತ್ತಿರುವ ಕ್ರಮ, ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿಯಂತೆ ಅನುಸರಿಸುತ್ತಿರುವ ಕ್ರಮಗಳು, ಆಕ್ಸಿಜನ್ ಹಾಗೂ ಲಸಿಕೆಗಳ ಬೇಡಿಕೆ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯದ ಪಾಳೆಯ ಹಂಚಿಕೆ ಕುರಿತಂತೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ರೆಮ್‍ಡಿಸಿವರ್ ಲಸಿಕೆ ಹಾಗೂ ಆಕ್ಸಿಜನ್ ಸಿಲೆಂಡರ್‍ಗಳ ಅವಶ್ಯಕತೆ ಇದ್ದರೆ ಮುಂಜಾಗ್ರತೆಯಾಗಿ ಬೇಡಿಕೆ ಸಲ್ಲಿಸಿದರೆ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ. ತಕ್ಷಣ ಪರಿಹಾರ ಒದಗಿಸಲಾಗುವುದು. ವೈದ್ಯಾಧಿಕಾರಿಗಳ ಅವಶ್ಯವಿದ್ದರೆ ಆಯುಷ್ ವೈದ್ಯರನ್ನು ನೇಮಕಮಾಡಿಕೊಳ್ಳಲಾಗುವುದು. ಗಂಟಲು ದ್ರವ ತಪಾಸಣೆ ಹಾಗೂ ಲಸಿಕೆ ನೀಡುವ ಕಾರ್ಯಯದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನಿವಾರಿಸಲಾಗುವುದು. ಮನೆ ಮನೆ ಭೇಟಿ ನೀಡಿ ತಪಾಸಣೆ ಹಾಗೂ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಮಾಸ್ಕ್ ಧರಿಸುವುದುನ್ನು ಕಡ್ಡಾಯಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಜನತಾ ಕಫ್ರ್ಯೂ ಇದ್ದಹಾಗೆ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು, ಮಾಸ್ಕಧರಿಸಬೇಕು ಹಾಗೂ ಮನೆಯಲ್ಲೇ ಇದ್ದರೆ ಜಿಲ್ಲೆಯಲ್ಲಿ ಕೋವಿಡ್ ಹರಡುವುದನ್ನು ನಿಯಂತ್ರಿಸಬಹುದು. ಸ್ವಯಂ ಪ್ರೇರಣೆಯಿಂದ ನಿಯಮ ಪಾಲನೆಗೆ ಮುಂದಾಗುವಂತೆ ಮನವಿ ಮಾಡಿಕೊಂಡರು.
ಶಿಗ್ಗಾಂವ ಕೋವಿಡ್ ನೋಡಲ್ ಅಧಿಕಾರಿ ಡಾ.ವಿವೇಕ, ಫಿಜಿಸಿಯನ್ ಡಾ.ಉದಯ, ಸವಣೂರ ತಾಲೂಕಾ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಜಶೇಖರ ಮೂಲಿಮನಿ, ಎಂ.ಒ. ಡಾ.ಶಂಕರಗೌಡ ಇತರರು ಉಪಸ್ಥಿತರಿದ್ದರು.

Share this News
error: Content is protected !!