June 13, 2021

ಕೊರೋನಾ ನಿಯಂತ್ರಣ ಕೈಚೆಲ್ಲಿದ ಕೇಂದ್ರಸರ್ಕಾರ.. ಶ್ರೀನಿವಾಸ ಮಾನೆ ಆಕ್ರೋಶ..!

ಹಾನಗಲ್- ದೇಶದಾದ್ಯಂತ ಆಮ್ಲಜನಕ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸುಪ್ರೀಂ ಕೋರ್ಟ್ ರಂಗ ಪ್ರವೇಶಿಸಿ 12 ತಜ್ಞರ ಕಾರ್ಯಪಡೆ ರಚಿಸಿದ್ದು, ತಜ್ಞರ ಸಲಹೆ-ಸೂಚನೆ ಆಧರಿಸಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ವಿಶ್ವಾಸ ಕಳೆದುಕೊಂಡಿರು -ವುದರಿಂದ ಜನರ ಸಾವು-ನೋವು ನೋಡಲಾಗದೇ ಸುಪ್ರೀಂ ಕೋರ್ಟ್ ಆಡಳಿತದ ರಂಗ ಪ್ರವೇಶಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ವಿಧಾನ ಪರಿಷತ್ ಶಾಸಕ ಶ್ರೀನಿವಾಸ್ ಮಾನೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಆಮ್ಲಜನಕ ಸಿಗದೇ ಸಾವಿರಾರು ಸಂಖ್ಯೆಯ ಸೋಂಕಿತರು ಜೀವ ಬಿಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಮರ್ಪಕವಾಗಿ ಆಮ್ಲಜನಕ ಪೂರೈಸದೇ ಪರೋಕ್ಷವಾಗಿ ಜನರ ಸಾವು-ನೋವಿಗೆ ಕಾರಣವಾಗುತ್ತಿದೆ ಎಂದು ರಾಜ್ಯ ಸರ್ಕಾರಗಳು ಕೋರ್ಟ್ ಮೆಟ್ಟಿಲೇರುತ್ತಿವೆ. ಪರಿಸ್ಥಿತಿಯ ವಾಸ್ತವತೆ ಅರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛಿಮಾರಿ ಹಾಕುತ್ತಿದೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಕೈಚಲ್ಲಿದಂತಿರುವ ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಯನ್ನು ನೀವೇ ಮಾಡಿ ಎಂದು ಸುಪ್ರೀಂ ಕೋರ್ಟ್ ಗೆ ಹೇಳಿದಂತಿದೆ ಎಂದು ಶ್ರೀನಿವಾಸಮಾನೆ ಅಭಿಪ್ರಾಯಪಟ್ಟಿದ್ದಾರೆ.

ವೈಜ್ಞಾನಿಕ ರೀತಿಯಲ್ಲಿ ಆಮ್ಲಜನಕ ಹಂಚಿಕೆ, ಜತೆಗೆ ಔಷಧ, ವೈದ್ಯಕೀಯ ಸಿಬ್ಬಂದಿ, ಲಸಿಕೆಗಳ‌ ಲಭ್ಯತೆ ಖಾತರಿ ಪಡಿಸಿಕೊಳ್ಳುವುದು ಸೇರಿದಂತೆ ಅಗತ್ಯ ನಿರ್ವಹಣಾ ಕ್ರಮಗಳನ್ನು ಸುಪ್ರೀಂ ಕೋರ್ಟ್ ರಚಿಸಿರುವ ತಜ್ಞರ ಕಾರ್ಯಪಡೆ ನೋಡಿಕೊಳ್ಳಲಿದೆ. ಕೊರೊನಾ ನಿಯಂತ್ರಣದಲ್ಲಿ ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಕೇಂದ್ರ ಸರ್ಕಾರ ಕೈಚೆಲ್ಲಿರುವುದರಿಂದ ಇಂದು ಇಡೀ ದೇಶ ಸಂಕಷ್ಟ ಎದುರಿಸುವಂತಾಗಿದೆ. ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಬಣ್ಣದ ಮಾತುಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದ ಬಿಜೆಪಿಯ ನಿಜಬಣ್ಣ ಮತ್ತೊಮ್ಮೆ ಬಯಲಾಗಿದೆ ಎಂದು ಶ್ರೀನಿವಾಸ್ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this News
error: Content is protected !!