June 13, 2021

HAVERI| ಶವಾಗಾರ ಸಿಬ್ಬಂದಿಯ ಎಡವಟ್ಟು: ಸೋಂಕಿತರ ಮೃತದೇಹ ಅದಲು ಬದಲು, ಕೊನೆಸಲ ತಾಯಿ ಮುಖ ನೋಡದೇ ಮಕ್ಕಳು ಕಂಗಾಲು..!

ಹಾವೇರಿ – ಕೊರೋನಾ ಅರ್ಭಟ ರಾಜ್ಯದಲ್ಲಿ ಮುಂದುವರೆದಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಸೋಂಕಿತರ ಶವ ಅದಲು ಬದಲು ಮಾಡಿ ಶವಾಗಾರದ ಸಿಬ್ಬಂದಿ ಆವಾಂತರ ಸೃಷ್ಟಿಸಿದ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ‌ ನಡೆದಿದೆ. ಹೆತ್ತವ್ವಳ ಮುಖ ನೋಡಲು ಶವಾಗಾರದ ಮುಂದೆ ಕಣ್ಣೀರು ಹಾಕುತ್ತಾ ಮಕ್ಕಳು ಕಾದು ಕುಳಿತಿದ್ದಾರೆ.

ನಿನ್ನೆ ರಾತ್ರಿ ಮೃತಪಟ್ಟಿದ್ದ ಮಹಿಳೆಯರ ಶವಗಳು ಅದಲು ಬದಲಾಗಿದೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ನೇಶ್ವಿ ಗ್ರಾಮದ 62 ವರ್ಷದ ಮಹಿಳೆಯ ಮೃತದೇಹವನ್ನು, ಆಲದಕಟ್ಟಿ ಗ್ರಾಮದ ಮಹಿಳೆಯ ಕುಟುಂಬಕ್ಕೆ, ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ 64ವರ್ಷದ ಸೋಂಕಿತ ಮೃತ ಮಹಿಳೆಯ ಮೃತದೇಹವನ್ನು ನೇಶ್ವಿ ಗ್ರಾಮದ ಕುಟುಂಬಕ್ಕೆ ನೀಡಿದ್ದಾರೆ.

ದುರಾದೃಷ್ಟವಶಾತ್ ಆಲದಕಟ್ಟಿಯ ಗ್ರಾಮದ ಮಹಿಳೆಯ ಸಂಬಂಧಿಕರು, ನೇಶ್ವಿ ಗ್ರಾಮದ ಮಹಿಳೆಯ ಶವವನ್ನು ಈಗಾಗಲೇ ಕೋವಿಡ್ ನಿಯಮಾನುಸಾರ ಮುಸ್ಲೀಂ ವಿಧಿವಿಧಾನಗಳಂತೆ ದಫನ್ ಮಾಡಿದ್ದಾರೆ.

ಇತ್ತ ಕಡೆ, ನೇಶ್ವಿ ಗ್ರಾಮದ ಮೃತ ಮಹಿಳೆಯ ಮಕ್ಕಳು ನಾವು ನಮ್ಮ ತಾಯಿಯ ಮುಖ ನೋಡಬೇಕು, ತಾಯಿಯ ಶವವನ್ನು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ನಮಗೆ ನೀಡಬೇಕು ಎಂದು ಶವಾಗಾರದ ಮುಂದೆ ಅಂಗಲಾಚುತ್ತಿದ್ದಾರೆ. ಅತ್ತ ಕಡೆ, ಆಲದಕಟ್ಟಿ ಗ್ರಾಮದ ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರಿಂದ ಮಹಿಳೆಯ ಅಂತ್ಯಕ್ರಿಯೆ ಮಾಡಿಲಾಗಿದೆ, ಶವವನ್ನು ಮತ್ತೆ ಹೊರ ತೆಗೆಯುವುದು ಬೇಡ ಅಂತಾ ಪಟ್ಟುಹಿಡಿದ್ದಾರೆ.

ಸ್ಥಳದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಸಂಬಂಧಿಕರ ಮನವೊಲಿಸುವ ಕಾರ್ಯ‌ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಎರಡು ಕುಟುಂಬದ ಸದಸ್ಯರು ಕಂಗಾಲು ಆಗಿದ್ದಾರೆ.

ತಾಯಿ ಮುಖ ನೋಡಲಾಗದ ಪರಿಸ್ಥಿತಿಗೆ ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಆದ ಅನ್ಯಾಯ ಬೇರೆ ಕುಟುಂಬಕ್ಕೆ ಆಗಬಾರದು ಎಂದು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

_____

Share this News
error: Content is protected !!