June 22, 2021

ಬ್ಲಾಕ್‌ ಫಂಗಸ್‌ ಅಬ್ಬರದ ನಡುವೆಯೇ ಬಂದ ಭಯಾನಕ ವೈಟ್‌ ಫಂಗಸ್‌..!

ಪಾಟ್ನಾ: ಕೊರೊನಾ ವೈರಸ್‌ನಿಂದ ಜನರು ದಿಕ್ಕೆಟ್ಟಿರುವಾಗ ಹುಟ್ಟಿಕೊಂಡ ಬ್ಲಾಕ್‌ ಫಂಗಸ್‌ ಅನಾಹುತ ಸೃಷ್ಟಿಸುತ್ತಿರುವ ನಡುವೆಯೇ, ಇದೀಗ ವೈಟ್‌ ಫಂಗಸ್‌ ಕೂಡ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ಪಟ್ನಾನ ಖ್ಯಾತ ವೈದ್ಯರೂ ಸೇರಿದಂತೆ ಬಿಹಾರದ ನಾಲ್ಕು ರೋಗಿಗಳಲ್ಲಿ ವೈಟ್‌ ಫಂಗಸ್‌ (ಬಿಳಿ ಶಿಲೀಂಧ್ರ) ಪತ್ತೆಯಾಗಿದೆ. ತಜ್ಞರ ಪ್ರಕಾರ, ಬ್ಲಾಕ್‌ ಫಂಗಸ್‌ಗಿಂತಲೂ ಈ ವೈಟ್‌ ಫಂಗಸ್‌ ಹೆಚ್ಚು ಅಪಾಯಕಾರಿ. ಶ್ವಾಸಕೋಶದ ಜೊತೆಗೆ ಹೊಟ್ಟೆ, ಕಿಡ್ನಿ, ಮೆದುಳು, ಉಗುರು, ಚರ್ಮದ ಹಾಗೂ ಖಾಸಗಿ ಅಂಗಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರಬಲ್ಲದು.

ಈ ಕುರಿತು ಪಿಎಂಸಿಎಚ್‌ನ ಮೈಕ್ರೊಬಯಾಲಜಿ ಮುಖ್ಯಸ್ಥ ಡಾ. ಎಸ್‌.ಎನ್‌.ಸಿಂಗ್‌ರವರನ್ನು ವಿಚಾರಿಸಿದಾಗ, “ವೈಟ್‌ ಫಂಗಸ್‌ ಕೂಡ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇದು ಕಂಡುಬರಬಹುದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹಾಗೂ ಸ್ಟಿರಾಯ್ಡ್‌ ಔಷಧಿ ತೆಗೆದುಕೊಳ್ಳುತ್ತಿರುವ ರೋಗಿಗಳ ಮೇಲೆ ಇದರ ಪರಿಣಾಮ ಗಂಭೀರವಾಗಿರುತ್ತದೆ. ವೆಂಟಿಲೇಟರ್‌ಗಳನ್ನು ಆಗಾಗ ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸುವ ಮೂಲಕ ವೈಟ್‌ ಫಂಗಸ್‌ನ್ನು ನಿಯಂತ್ರಣಕ್ಕೆ ತರಬಹುದು” ಎಂದು ಮಾಹಿತಿ ನೀಡಿದ್ದಾರೆ.

ಶೀತ, ಕೆಮ್ಮು, ಜ್ವರ, ತಲೆನೋವು ಮುಂತಾದ ಕೊರೊನಾ ಸೋಂಕಿನ ಲಕ್ಷಣಗಳನ್ನೇ ವೈಟ್‌ ಫಂಗಸ್‌ ಹೊಂದಿದೆ. ಕೊರೊನಾ ನೆಗೆಟಿವ್‌ ಬಂದಿರುವ ರೋಗಿಗಳಲ್ಲೂ ಈ ಹೊಸ ಮಹಾಮಾರಿ ಕಂಡುಬಂದಿದೆ. ಆ್ಯಂಟಿ ಫಂಗಲ್‌ ಚಿಕಿತ್ಸೆ ನೀಡಿದ ಬಳಿಕ ವೈಟ್‌ ಫಂಗಸ್‌ ರೋಗಿಗಳಲ್ಲಿ ಚೇತರಿಕೆಯ ಲಕ್ಷಣ ಗೋಚರಿಸುತ್ತಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

Share this News
error: Content is protected !!