June 13, 2021

ಜಿಪಂ ಟಿಕೆಟ್‌ಗಾಗಿ ವಾಮಾಚಾರ.? ಎರಡು ಮಂಗಗಳ ಬಲಿ: ಬ್ಯಾಡಗಿಯಲ್ಲೊಂದು ಪೈಶಾಚಿಕ ಕೃತ್ಯ..!

ಬ್ಯಾಡಗಿ: ವಾಮಾಚಾರ ಮಾಡಲು ಎರಡು ಕೋತಿಗಳನ್ನು ಬಲಿಕೊಟ್ಟ ಅಮಾನವೀಯ ಘಟನೆ ಬ್ಯಾಡಗಿ ತಾಲೂಕಿನಲ್ಲಿ ನಡೆದಿದ್ದು, ಜಿಲ್ಲಾ ಪಂಚಾಯಿತಿ ಚುನಾವಣೆಯ ಟಿಕೆಟ್‌ ಪಡೆಯಲು ರಾಜಕಾರಣಿಯೊಬ್ಬರು ಈ ಕುತಂತ್ರ ಮಾಡಿಸಿದ್ದಾರೆ ಎನ್ನಲಾಗಿದೆ.

ಕೋತಿಗಳ ಕತ್ತರಿಸಲ್ಪಟ್ಟ ತಲೆಗಳನ್ನು ತಿಪಲಾಪುರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನೇತು ಹಾಕಿರುವ ಕಿಡಿಗೇಡಿಗಳು, ಇತರೆ ಭಾಗಗಳನ್ನು ಗ್ರಾಮದ ಹೊರವಲಯದಲ್ಲಿ ಸುಟ್ಟಿದ್ದಾರೆ. ಮೇ 8ರಂದು ನಡೆದ ಈ ಅಮಾನವೀಯ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಮೂಢನಂಬಿಕೆ ವಿರುದ್ಧ ಪ್ರಾಣಿಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೋಟೆಬೆನ್ನೂರಿನ ಉಪವಲಯ ಅರಣ್ಯಾಧಿಕಾರಿ ವಸಂತ್‌ ಕುಮಾರ್‌ರವರು ವನ್ಯಜೀವಿ ಸಂರಕ್ಷಣಾ ಕಾಯಿದೆ – 1972ರ ಸೆಕ್ಷನ್‌ 2(16), 9 ಹಾಗೂ 51ರ ಅಡಿಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ್‌ ಮಾರೆಣ್ಣವರ್‌ ತಿಳಿಸಿದ್ದಾರೆ.

“ಕೆಲವು ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಶಂಕಿತರನ್ನು ಕರೆಸಿ ವಿಚಾರಣೆ ಮಾಡಲಾಗುತ್ತದೆ. ವಾಮಾಚಾರಕ್ಕೆ ಯತ್ನಿಸಿರುವುದು ಸಾಬೀತಾರದರೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಉಪ ಸಂರಕ್ಷಕ ಎ.ಎಚ್‌.ಅಶೋಕ್‌ ಮಾಹಿತಿ ನೀಡಿದ್ದಾರೆ.

ಚುನಾವಣಾ ಟಿಕೆಟ್‌ಗಾಗಿ ವಾಮಾಚಾರ..?

ರಾಷ್ಟ್ರೀಯ ಪಕ್ಷವೊಂದರ ರಾಜಕಾರಣಿಯೊಬ್ಬರು ಜಿಲ್ಲಾ ಪಂಚಾಯತ್‌ ಚುನಾವಣೆಯ ಟಿಕೆಟ್‌ ತನಗೇ ಸಿಗಬೇಕೆಂಬ ಉದ್ದೇಶದಿಂದ ವಾಮಾಚಾರ ಮಾಡಿಸಿರುವ ಆರೋಪ ಕೇಳಿಬಂದಿದೆ. ಅವರ ಅಭಿಮಾನಿಗಳೇ ಗಂಡು ಹಾಗೂ ಹೆಣ್ಣು ಕೋತಿಯನ್ನು ಹಿಡಿದುಕೊಟ್ಟಿದ್ದಾರೆ ಎನ್ನಲಾಗಿದೆ.

Share this News
error: Content is protected !!