June 13, 2021

ಆ ಮೊಬೈಲ್ ನಲ್ಲಿ ನನ್ನ ತಾಯಿಯ ನೆನಪುಗಳಿವೆ. ದಯವಿಟ್ಟು ವಾಪಸ್ಸು ಕೊಡಿ: ಕಳೆದಕೊಂಡ ಮೊಬೈಲ್ ಪೋನಗಾಗಿ ಕಂದಮ್ಮನ ಪತ್ರ..!

ಮಡಿಕೇರಿ : ಕೊರೋನಾ ಅರ್ಭಟಕ್ಕೆ ರಾಜ್ಯವೇ ತತ್ತರಿಸಿ ಹೋಗಿದೆ. ಅದರೆ ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ನನ್ನ ತಾಯಿ ನೆನೆಪುಗಳು ಇರುವ ಮೊಬೈಲ್ ಫೋನ್ ದಯವಿಟ್ಟು ಹಿಂದಿರುಗಿಸಿ ಎಂದು ಪುಟ್ಟ ಬಾಲಕಿಯೊಬ್ಬಳು ಎಲ್ಲರ ಮನಕಲಕುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ನಡೆದಿದೆ.

ಗುಮ್ಮನಕೊಲ್ಲಿ ಹೃತೀಕ್ಷಾ ಬಾಲಕಿ ಎಲ್ಲರ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ. ಮೇ 6 ರಂದು ಹೃತೀಕ್ಷಾ ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊವಿಡ್ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಿದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾಳೆ.


ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಿರುವುದಿಲ್ಲ. ಆ ಫೋನ್ ನಲ್ಲಿ ನನ್ನ ತಾಯಿಯ ನೆನೆಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿ. ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಎಂದು ಬಾಲಕಿ ಹೃತೀಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಓದುಗರ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ. ಈ ಬಾಲಕಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಯವಿಟ್ಟು ಯಾರಿಗಾದರೂ ಸಿಕ್ಕರೆ ಬಾಲಕಿಗೆ ತಲುಪಿಸುವ ಕಾರ್ಯ ಮಾಡಿ, ತಾಯಿ ನೆನಪು ಆ ಬಾಲಕಿಗೆ ಮತ್ತೆ ಸಿಗಲಿ..

_____

Share this News
error: Content is protected !!