June 13, 2021

BLACK DAY| ಎಸ್ಎಫ್ಐ-ಡಿವೈಎಫ್ಐ ನಿಂದ ಸರಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ: ಮನೆ ಮನೆ ಎದುರು ಪೋಸ್ಟರ್ ಪ್ರದರ್ಶನ..!

ಹಾವೇರಿ: ಜನ ವಿರೋಧಿ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರ ಐತಿಹಾಸಿಕ ಹೋರಾಟವು ಇಂದು ಮೇ 26 ಕ್ಕೆ 6 ತಿಂಗಳಾಗಿದ್ದು, ಟ್ರೇಡ್ ಯೂನಿಯನ್‌ಗಳ ಅಖಿಲ ಭಾರತ ಮುಷ್ಕರವೂ 6 ತಿಂಗಳುಗಳನ್ನು ಪೂರ್ತಿಗೊಳಿಸಿದೆ. ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೇ ಸಾವೀಗೀಡಾಗುತ್ತಿದ್ದರೂ ಸರಕಾರ ಸಮರ್ಪಕ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಗಳು ಮನೆ ಮನೆ ಎದುರು ಪೋಸ್ಟರ್ ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕೇಂದ್ರ ಹಾವೇರಿ, ದೇವಿಹೋಸೂರು, ಕುರುಬಗೊಂಡ ಹಾಗೂ ಹಾಲಗಿಯಲ್ಲಿ ಈ ಪ್ರತಿಭಟನೆ ನಡೆಯಿತು. ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ಡಿವೈಎಫ್ಐ ಕಾರ್ಯಕರ್ತರು ಕೇಂದ್ರ, ರಾಜ್ಯ ಸರಕಾರಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮಿಂಚಂಚೆ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸರಕಾರಗಳು ಲಾಕ್ಡೌನ್ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ ಅಲ್ಲದೇ ಇದ್ದ ದುಡಿಮೆಯನ್ನು ಕಳೆದುಕೊಂಡು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದು ಸರಕಾರವೇ ಇದಕ್ಕೆ ನೇರ ಹೊಣೆ ಎಂದು ಅಪಾದಿಸಿದರು.

ಸರಕಾರಗಳು ಸಮರೋಪಾದಿಯಲ್ಲಿ ಆಮ್ಲಜನಕ, ವೆಂಟಿಲೇಟರ್, ಔಷಧಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಒದಗಿಸಲು ಪಿಎಂ ಕೇರ್ ನ ಬೃಹತ್ ಹಣವನ್ನು ಬಳಸಬೇಕು ಹಾಗೂ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿಲ್ಲಿಸಿ, ಅದರ ಹಣವನ್ನೂ ಸಹ ಕೋವಿಡ್ ರೋಗ ನಿಯಂತ್ರಣಕ್ಕೆ ಬಳಸಬೇಕು. ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ನಾಗರಿಕರಿಗೆ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗುವಷ್ಟು ಹಣವನ್ನು ನಿಗದಿಪಡಿಸಬೇಕು ಎಂದು ಅಗ್ರಹಿಸಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ತೆರಿಗೆದಾರರಲ್ಲದ ಕುಟುಂಬಗಳ ಖಾತೆಗೆ ತಕ್ಷಣ ₹10,000/- ರೂ.ಗಳನ್ನು ಹಾಕಬೇಕು. ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ದ್ವಿದಳ ಧಾನ್ಯ, ಎಣ್ಣೆ, ಸಕ್ಕರೆ ಮುಂತಾದ ಇತರ ಅಗತ್ಯ ವಸ್ತುಗಳನ್ನು ಪಿಡಿಎಸ್- ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಒದಗಿಸಬೇಕು ಎಂದರು.

ಮನರೇಗಾ ಕೆಲಸವನ್ನು ವಿಸ್ತರಿಸಿ, ಕೂಲಿಯನ್ನು ಹೆಚ್ಚಿಸಬೇಕು. ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಬೇಕು. ಖಾಸಗಿ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ ಮಾತನಾಡಿ, ಎಲ್ಲಾ ನೋಂದಾಯಿತ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಪಡಿತರ ವ್ಯವಸ್ಥೆಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಉಚಿತವಾಗಿ ನೀಡಬೇಕು. ಶೈಕ್ಷಣಿಕ ಕ್ಷೇತ್ರದ – ಸೆಮಿಸ್ಟರ್ ಶುಲ್ಕ ಸೇರಿದಂತೆ ಎಲ್ಲಾ ತರಹದ ಶುಲ್ಕಗಳನ್ನು ಹಿಂತೆಗೆದುಕೊಳ್ಳಬೇಕು. ಎಲ್ಲಾ ಶೈಕ್ಷಣಿಕ ಸೌಲಭ್ಯಗಳು, ಅಗತ್ಯ ಗ್ಯಾಜೆಟ್ಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಎಲ್ಲಾ ಬಡವರಿಗೆ ಹಾಗೂ ಸಾಮಾಜಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗುರುನಾಥಸಿಂಗ್ ಕಹಾರ, ಮಲ್ಲೇಶ ಗೋಟನವರ, ಅಣ್ಣಾಸಿಂಗ್ ಕಹಾರ, ಅರುಣ ಕಡಕೋಳ, ಪ್ರಸನ್ನ ಕಡಕೋಳ, ಅರುಣ ಆರೇರ, ಹಸನ್ ಹುಬ್ಬಳ್ಳಿ, ಸಿದ್ದು ಕುಂಬಾರ, ನಾಗರಾಜ ಕಹಾರ, ಅಕ್ಷಯ್ ರಜಪೂತ, ಅರ್ಜುನ ಕಾಕಡೆ, ಶಿವರಾಜ ಕಮ್ಮಾರ, ಕಿರಣ ಭಜಂತ್ರಿ, ಮಣಿಕಂಠ ಬಡಕರಿಯಪ್ಪನವರ, ಚಂದನ್ ಅಂಗಡಿ, ಸುಪ್ರೀತ್ ಮ್ಯಾಗಳಮನಿ, ದೇವರಾಜ ಹಾವೇರಿ, ಕೃಷ್ಣಾ ಮಾಯಾಚಾರಿ, ದಾದಾಪೀರ್ ಕಲೆಗಾರ, ಹರೀಶ ಕಮ್ಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this News
error: Content is protected !!