June 13, 2021

ಹೆಚ್ಚಿದ ಮರಣ ಪ್ರಮಾಣ: ಕೆಲಸ ಮಾಡದವರು ಯಾವುದೇ ಹುದ್ದೆಯಲ್ಲಿರಲಿ ಅವರನ್ನು ಅಮಾನತ್‍ಗೊಳಿಸಿ; ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಗೃಹ ಸಚಿವರು.!

ಹಾವೇರಿ- ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಕೆ ಕುರಿತಂತೆ ವಿಳಂಬವಾದ ಕಾರಣ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ನಿಮಗೆ ಸಮಯ ಪ್ರಜ್ಞೆ ಇದೆಯಾ? ಜನ ಸಾಯುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಹೇಗೆ ಕೆಲಸಮಾಡಬೇಕು ಎಂಬುದನ್ನು ಕಲಿಯಿರಿ. ಯಾವುದೇ ನೆಪ ಹೇಳದೇ ಮುಂದಿನ ಮೂರು ದಿನಗಳ ಒಳಗಾಗಿ ಎಂಟು ವೆಂಟಿಲೇಟರ್‍ಗಳನ್ನು ಅಳವಡಿಸಿ ಸಾರ್ವಜನಿಕ ಸೇವೆಗೆ ಲಭ್ಯವಿರಬೇಕು ಎಂದು ತಾಕೀತು ಮಾಡಿದರು.

ಸೋಮವಾರ ಜಿಲ್ಲಾಡಳಿತದೊಂದಿಗೆ ಬೆಂಗಳೂರನಿಂದ ವಿಡಿಯೋ ಸಂವಾದ ನಡೆಸಿದ ಬಸವರಾಜ ಬೊಮ್ಮಾಯಿ ಅವರು, ಜಿಲ್ಲೆಯ ತಾಲೂಕಾವಾರು ಕೋವಿಡ್ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆದುಕೊಂಡರು.

ಕೋವಿಡ್ ಟೆಸ್ಟ್ ಸೇರಿದಂತೆ ಪಾಸಿಟಿವ್ ಪ್ರಮಾಣಗಳ ಕಡಿತ ಹಾಗೂ ಮರಣ ಪ್ರಮಾಣ ಕಡಿತಗೊಳಿಸಲು ಆರೋಗ್ಯ ಇಲಾಖಾ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸರಿಯಾಗಿ ಕೆಲಸಮಾಡದವರು ಯಾವುದೇ ಹುದ್ದೆಯಲ್ಲಿ ಇರಲಿ ಅವರನ್ನು ಅಮಾನತ್‍ಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ , ಡಾ. ನಿಲೇಶ್, ಡಾ.ಜಯಾನಂದ, ಡಾ.ದಯಾನಂದ, ಡಾ.ಪ್ರಭಾಕರ ಕುಂದೂರ, ತಹಶೀಲ್ದಾರ ಗಿರೀಶ ಸ್ವಾದಿ, ವಿವಿಧ ತಾಲೂಕು ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು

Share this News
error: Content is protected !!