June 18, 2021

ವರಕವಿ ಸರ್ವಜ್ಞನ ನಾಡಲ್ಲಿ ನರೇಗಾ ಹಸಿರು ಕ್ರಾಂತಿ; ಮನರೇಗಾ ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 2 ಲಕ್ಷ ಪರಿಹಾರ.!

ರಟ್ಟಿಹಳ್ಳಿ: ದೇಶದ, ನಾಡಿನ ಅಭಿವೃದ್ಧಿ ಎಂದರೆ ಅದು ಪರಿಸರವನ್ನು ಉಳಿಸಿ, ಬೆಳೆಸುವುದಾಗಿದೆ ಎಂದು ರಟ್ಟೀಹಳ್ಳಿ ತಾಲೂಕು ಪಂಚಾಯತಿ ಐಇಸಿ ಸಂಯೋಜನಾಧಿಕಾರಿ ಕುಮಾರಯ್ಯ ಚಿಕ್ಕಮಠ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಗುಂಡಗಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ರಟ್ಟೀಹಳ್ಳಿ, ಗ್ರಾಮ ಪಂಚಾಯತಿ ಇಂಗಳಗೊಂದಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೈಗಾರಿಕರಣ, ನಗರೀಕರಣವೇ ಅಭಿವೃದ್ಧಿಯಲ್ಲ. ಸಮತೋಲನದಿಂದ ಪರಿಸರವನ್ನು ರಕ್ಷಿಸಿ, ಪೋಷಿಸುವುದು ಕೂಡ ಅಭಿವೃದ್ಧಿಯಾಗಿದೆ. ಪ್ರಸ್ತುತ ಕರೊನಾದಂತಹ ಈ ಸಾಂಕ್ರಾಮಿಕ ಖಾಯಿಲೆಯ ಸಂದರ್ಭದಲ್ಲಿ ಪ್ರತಿವೊಬ್ಬರಿಗೂ ಪರಿಸರ ಮತ್ತು ಆಮ್ಲಜನಕದ ಮಹತ್ವ ತಿಳಿದಿದೆ. ಹೀಗಾಗಿ ಪ್ರತಿವೊಬ್ಬರು ಮನೆಗೊಂದು ಸಸಿಯನ್ನು ನೆಡಬೇಕು ಎಂದು ಹೇಳಿದರು. ನರೇಗಾ ಯೋಜನೆಯಿಂದ ಪರಿಸರ, ಮಣ್ಣು, ಜಲಮೂಲಗಳ ಸಂರಕ್ಷಣೆ ಕಾಮಾಗರಿಗಳನ್ನು ಕೈಗೆತ್ತಿಕೊಂಡು, ಹೊಸ ಆಸ್ತಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಗುಂಡಗಟ್ಟಿ ಸಸ್ಯಪಾಲನಾ ಕ್ಷೇತ್ರದಲ್ಲಿ, ನರೇಗಾ ಯೋಜನೆಯಡಿ 23 ಸಾವಿರ ಸಸಿಗಳನ್ನು ಕಳೆದೊಂದು ವರ್ಷದಿಂದ ಬೆಳೆಸಲಾಗಿದೆ. ಈ ಮನ್ಸೂನ್ ಲ್ಲಿ ಗುಂಡಗಟ್ಟಿ, ದೂದಿಹಳ್ಳಿ, ಕಡೂರು ಅರಣ್ಯ ಪ್ರದೇಶದಲ್ಲಿ ನೆಡಲಾಗುತ್ತಿದೆ.

ಇನ್ನೂ ಈ ನರೇಗಾ ಕೆಲಸದ ಸ್ಥಳದಲ್ಲಿ ಆಕಸ್ಮಿಕವಾಗಿ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ ಎರಡು ಲಕ್ಷದವರೆಗೂ ಪರಿಹಾರವನ್ನು ನೀಡಲಾಗುತ್ತದೆ. ಈ ಆರ್ಥಿಕ ವರ್ಷದಿಂದ ಪ್ರತಿ ದಿನದ ಕೂಲಿ ಹಣ 289 ರೂಪಾಯಿ ಜೊತೆಗೆ 10 ರೂಪಾಯಿ ಸಾಮಗ್ರಿ ವೆಚ್ಚ ಸೇರಿದಂತೆ 299 ರೂಪಾಯಿ ನರೇಗಾ ಯೋಜನೆಯಡಿ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಕಾರ್ಮಿಕರಿಗೆ ಸಿಹಿ ಹಂಚಲಾಯಿತು, ಅಲ್ಲದೆ ನರೇಗಾ ಕೆಲಸದ ಸ್ಥಳದಲ್ಲಿ ಕೋವಿಡ್-19 ನಿಯಮ ಪಾಲನೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ನಂತರ ಹಿರೇಕೆರೂರು ಅರಣ್ಯ ಉಪಶಾಖೆಯ ಅರಣ್ಯಾಧಿಕಾರಿ ವಿ.ಬಿ.ಮೋಹಿತೆ ಮಾತನಾಡಿ, ಗುಂಡಗಟ್ಟಿ ಅರಣ್ಯ ಪ್ರದೇಶದಲ್ಲಿ 15 ಜಾತಿಯ ಸಸಿಗಳ ಪಾಲನೆ, ಪೋಷಣೆ ಮಾಡಲಾಗುತ್ತಿದೆ. ಅರಣ್ಯ ವಲಯದಲ್ಲಿ ಹೆಚ್ಚಿನ ಆಮ್ಲಜನಕ ಹೊರ ಸೂಸುವಂತಹ ಗಿಡ-ಮರಗಳಿಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗಿದೆ. ಅತೀ ಹೆಚ್ಚು ಆಕ್ಸಿಜನ್ ನೀಡುವ ಅರಳಿ ಸಸ್ಯಗಳನ್ನು ಬೆಳೆಸಲಾಗಿದೆ. ಈ ಅರಳಿ ಮರ ಸೇರಿದಂತೆ ಇತರೆ ಮರಗಳು ವನ್ಯ ಜೀವಿಗಳಿಗೆ ಆಹಾರವನ್ನು ನೀಡುತ್ತವೆ.
ಕಳೆದ ಬಾರಿ ಅರಣ್ಯ ಪ್ರದೇಶದ ಇಳಿಜಾರಿನಲ್ಲಿ ಮೂರುನೂರು ಟ್ರಂಚ್ ನಿರ್ಮಾಣ ಮಾಡಿ, ಸಸಿಗಳನ್ನು ನೆಡಲಾಗಿತ್ತು. ಸೀತಾಫಲ, ಇಲಾಚಿ ಸಸಿಗಳು ಇದೀಗ ಎತ್ತರವಾಗಿ ಬೆಳೆದಿದ್ದು, ಫಲವನ್ನು ನೀಡುತ್ತಿವೆ. ಇದು ಕಾಡು ಪ್ರಾಣಿಗಳು ಹಸಿವಿನಿಂದ ನರಳದಂತೆ ತಡೆಯಲು ಪ್ರಯೋಜನವಾಗಿದೆ ಎಂದರು.

ಈ ವೇಳೆ ಗ್ರಾಮ ಪಂಚಾಯತಿ ಸಿಬ್ಬಂದಿ ಚಂದ್ರೂ, ಗುಂಡಗಟ್ಟಿ ಗ್ರಾಮದ ನರೇಗಾ ಮೇಟ್ ಹಾಗೂ ‌ಕೂಲಿ ಕಾರ್ಮಿಕರು ಉಪಸ್ಥಿತ ಇದ್ದರು.‌

Share this News
error: Content is protected !!