July 25, 2021

ಮೀನಿನ ತಲೆಗಾಗಿ ಮದುವೆ ಮನೆಯಲ್ಲಿ ಹೊಡೆದಾಟ; ಮದುವೆಗೆ ಬಂದು ಆಸ್ಪತ್ರೆಗೆ ಸೇರಿದ ಸಂಬಂಧಿಕರು.!

ಪಟನಾ: ಮದುವೆಯಾಗುವಾಗ ವಧು ವರರ ಕುಟುಂಬದ ನಡುವೆ ಬೇರೆ ಬೇರೆ ಕಾರಣಗಳಿಗೆ ಜಗಳವಾಗುವುದನ್ನು ನೋಡಿರುತ್ತೇವೆ. ಆದರೆ ಮದುವೆ ಊಟದಲ್ಲಿ ಬಡಿಸುವ ಮೀನಿನ ತಲೆಗಾಗಿ ಹೊಡೆದಾಡುವುದನ್ನು ನೀವು ನೋಡಿದ್ದಿರಾ?

ಹೌದು. ಇಂತದ್ದೊಂದು ಘಟನೆ ಬಿಹಾರದ ಗೋಪಾಲ್ ಗಂಜ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣದಲ್ಲಿ ಬಂದು ಮದುವೆ ಮಾಡಿದ್ದರು. ಮದುವೆಯ ಕಾರ್ಯಕ್ರಮ ಮುಗಿದ ಮೇಲೆ ವಧುವಿನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟ ಮಾಡಲು ಕುಳಿತಿದ್ದರು. ಭರ್ಜರಿ ಬಾಡೂಟವೂ ನಡೆದಿತ್ತು.

ಈ ವೇಳೆ ವಧುವಿನ ಕಡೆಯ ವ್ಯಕ್ತಿಯೊಬ್ಬರು, ಊಟಕ್ಕೆ ಮೀನಿನ ತಲೆ ತಂದು ಹಾಕಲು ಕೇಳಿದ್ದಾರೆ. ಆದರೆ ವರನ ಕಡೆ ಊಟ ಬಡಿಸುವ ಕೆಲಸ ಮಾಡುತ್ತಿದ್ದವರು ಮೀನಿನ ತಲೆಯ ಪದಾರ್ಥಗಳನ್ನು ತಂದು ಹಾಕುವುದಕ್ಕೆ ತಡವಾಗಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಕೊನೆಗೆ ಜಗಳ ತಾರಕಕ್ಕೇರಿ ಕೋಲು, ಕಬ್ಬಿಣದ ರಾಡಿನಿಂದ ಸಂಬಂಧಿಕರು ಹೊಡೆದಾಡಿಕೊಂಡಿದ್ದಾರೆ.

ಈ ಹೊಡೆದಾಟದಲ್ಲಿ ವರ ಮತ್ತು ವಧುವಿನ ಕಡೆಯ 11 ಜನರಿಗೆ ಗಾಯಗಳಾಗಿವೆ. ಅನೇಕರ ತಲೆ, ಕೈ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ 11 ಮಂದಿ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.

Share this News
error: Content is protected !!