July 25, 2021

ಹುತಾತ್ಮ ಮೈಲಾರ ಮಹಾದೇವ ಅವರ ಮೊಮ್ಮಗ ಡಾ. ನರೇಂದ್ರ ಎಚ್.ಎಸ್ ಲೋಕ ಸೇವಾ ಆಯೋಗದ ಸದಸ್ಯರಾಗಿ ಆಯ್ಕೆ.!

ಹಾವೇರಿ : ಹಾವೇರಿಯ ಜಿಲ್ಲೆಯ ಡಾ. ನರೇಂದ್ರ ಎಚ್.ಎಸ್ ಅವರನ್ನು ರಾಜ್ಯಪಾಲರಾದ ವಾಜುಬಾಯಿ ವಾಲಾ ಅವರು ಕರ್ನಾಟಕ ಲೋಕಸೇವಾ ಆಯೋಗದ (ಕೆ.ಪಿ.ಎಸ್.ಸಿ) ಸದಸ್ಯರನ್ನಾಗಿ ನೇಮಕಾತಿ ಮಾಡಿದ್ದಾರೆ.

ಮೂಲತಃ ಬ್ಯಾಡಗಿ ತಾಲ್ಲೂಕಿನ ಮೋಟೇಬೆನ್ನೂರಿನವರಾದ ಡಾ. ನರೇಂದ್ರ ಅವರು ಹುತಾತ್ಮ ಮೈಲಾರ ಮಹಾದೇವ ಮತ್ತು ದಿ. ಸಿದ್ಧಮ್ಮ ಮೈಲಾರರ ಮೊಮ್ಮಗ. ಶ್ರೀಮತಿ ಕಸ್ತೂರಿದೇವಿ ಮತ್ತು ದಿ. ಎಚ್.ಎಸ್. ಸಿದ್ಧಲಿಂಗಯ್ಯ ಅವರ ಮಗ. 1991 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪದವಿ ಆನಂತರ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ ವಿ.ವಿ ಇಂದ ಎಂ. ಎಸ್. ಪದವಿ ಪಡೆದು, ಸತತ 24 ವರ್ಷಗಳ ಕಾಲ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜನಾನುರಾಗಿ ಆರ್ಥೋಪಿಡಿಶಿಯನ್ ರಾಗಿರುವ ಡಾ. ನರೇಂದ್ರ ಸದ್ಯ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿ ನಾಡಿನ ಜನರಿಗೆ ಸಂತೋಷ ತಂದಿದ್ದು, ಅದರಲ್ಲೂ ಹಾವೇರಿಗೆ ಹೆಮ್ಮೆಯ ವಿಷಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜೀವ ಬಲಿದಾನ ಮಾಡಿದ ಹುತಾತ್ಮರ ಕುಟುಂಬಕ್ಕೆ ಕರ್ನಾಟಕ ಸರಕಾರ ಸೂಕ್ತ ಗೌರವ ನೀಡಿದೆ ಎಂದು ಅಭಿಪ್ರಾಯ ಪಟ್ಟಿದೆ.

ಮೈಲಾರ ಮಹಾದೇವ ಟ್ರಸ್ಟಿನ ಸದಸ್ಯರುಗಳಾದ ವ್ಹಿ.ಎನ್. ತಿಪ್ಪನಗೌಡ, ಸತೀಶ ಕುಲಕರ್ಣಿ, ನಾಗೇಂದ್ರ ಕಟಕೋಳ, ಎಚ್.ಎಸ್. ಮಹಾದೇವಪ್ಪ ಅಭಿನಂದಿಸಿದ್ದಾರೆ.

Share this News
error: Content is protected !!