July 25, 2021

3rd WAVE| ಜುಲೈ 30ರೊಳಗಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ; ಮಕ್ಕಳೊಂದಿಗೆ ಬರುವ ಪಾಲಕರಿಗೂ ತಪಾಸಣೆ ಕಡ್ಡಾಯ; ಅಧಿಕಾರಿಗಳಿಗೆ ಗೃಹ ಸಚಿವರ ಖಡಕ್ ಸೂಚನೆ.!

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಜಿಲ್ಲೆಯಲ್ಲಿ ಹೆಚ್ಚು ಹಾನಿಮಾಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ಧವಾಗಿರುವಂತೆ ಅಧಿಕಾರಿಗಳಿಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಅತಿವೃಷ್ಟಿ ಸ್ಥಿತಿಗತಿಗಳ ಕುರಿತಂತೆ ಸಭೆಯಲ್ಲಿ ಮಾತನಾಡಿದ ಅವರು, ಮೂರನೇ ಅಲೆ ಮುಂಚಿತವಾಗಿ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿಕೆ ಪ್ರಮಾಣ ಹೆಚ್ಚಳವಾಗಬೇಕು. ಕನಿಷ್ಠ ದಿನಕ್ಕೆ ೧೦ ಸಾವಿರ ಜನರಿಗೆ ವ್ಯಾಕ್ಸಿನ್ ನೀಡಿಕೆಯ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ವ್ಯಾಕ್ಸಿನ್‌ನ ಕೊರತೆಯಾದರೆ ಜಿಲ್ಲೆಗೆ ಪೂರೈಕೆಯಾಗುವ ಪ್ರಮಾಣವನ್ನು ಹೆಚ್ಚಳಮಾಡಲಾಗುವುದು. ಮೊದಲ ಡೋಸ್ ನಂತರ ಎರಡನೇ ಡೋಸ್ ಪಡೆಯಲು ಮೊಬೈಲ್‌ಗೆ ಎಸ್.ಎಂ.ಎಸ್. ಸಂದೇಶ ಕಳುಹಿಸಲು ಸೂಚನೆ ನೀಡಿದರು. ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಿಕೆ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜುಲೈ 3೦ರೊಳಗಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ

ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಗ್ರಾಮಗಳಲ್ಲೂ ಮಕ್ಕಳ ವಿಶೇಷ ಆರೋಗ್ಯ ತಪಾಸಣೆಯನ್ನು ನಡೆಸಬೇಕು. ಜುಲೈ ೩೦ರೊಳಗಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಬೇಕು. ತಪಾಸಣೆಯ ಸಂದರ್ಭದಲ್ಲಿ ಅಪೌಷ್ಠಿಕತೆ ಅಥವಾ ಗಂಭೀರ ಕಾಯಿಲೆಗಳು ಕಂಡುಬಂದರೆ ತಜ್ಞವೈದ್ಯರಿಂದ ವಿಶೇಷ ಚಿಕಿತ್ಸೆ ಹಾಗೂ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳು, ಕ್ಷೀರಭಾಗ್ಯ ಯೋಜನೆಯ ಸೌಲಭ್ಯಗಳು, ಅಪೌಷ್ಠಿಕತೆ ನಿವಾರಣೆ, ರೋಗನಿರೋಧ ಶಕ್ತಿ ಹೆಚ್ಚಿಸುವ ಪ್ರೋಟಿನ್ ವಿಟಾಮಿನ್ ಸಪ್ಲಿಮೆಂಟ್ರಿಗಳು ಔಷಧಿಗಳನ್ನು ನೀಡುವುದರ ಮೂಲಕ ಕೋವಿಡ್ ಸೋಂಕನ್ನು ಮಕ್ಕಳು ಮೆಟ್ಟಿನಿಲ್ಲುವಂತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಮಕ್ಕಳೊಂದಿಗೆ ಬರುವ ಪಾಲಕರಿಗೂ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿದಿನ ವಾಟ್ಸಾಪ್‌ಗೆ ಮಾಹಿತಿ ರವಾನಿಸುವಂತೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಹಾಗೂ ವಾರಿಯರ್‌ಗಳಿಗೆ ಕೋವಿಡ್ ವ್ಯಾಕ್ಸಿನ್ ನೀಡಿಕೆಯ ಪ್ರಮಾಣ ಹೆಚ್ಚಳಮಾಡಬೇಕು. ಕನಿಷ್ಠ ಒಂದು ದಿನಕ್ಕೆ ೧೦ ಸಾವಿರ ಜನರಿಗೆ ವ್ಯಾಕ್ಸಿನ್ ನೀಡಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಿಕೆಗೆ ಕಾಲೇಜು ಕ್ಯಾಂಪಸ್‌ನಲ್ಲಿ ಉಪ ಕೇಂದ್ರಗಳನ್ನು ತೆರೆದು ಲಸಿಕೆ ನೀಡಬೇಕು. ಲಸಿಕೆಯ ಸರಬರಾಜು ಹಾಗೂ ಹಂಚಿಕೆಯನ್ನು ವ್ಯವಸ್ಥಿತವಾಗಿ ಯೋಜಿಸಿ ಕ್ರಮಕೈಗೊಳ್ಳಬೇಕು. ಲಸಿಕೆ ವೈಲ್‌ಗಳ ಪೂರೈಕೆ ಪ್ರಮಾಣ ಹೆಚ್ಚು ಅಗತ್ಯವಿದ್ದರೆ ವಯಕ್ತಿಕವಾಗಿ ಗಮನಹರಿಸಿ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಸೂಚನೆ ನೀಡಿದರು.
ಮಕ್ಕಳನ್ನು ಕೋವಿಡ್‌ನಿಂದ ರಕ್ಷಣೆಮಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಳಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಸ್ತುತವಿರುವ ಮಕ್ಕಳ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳಮಾಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ೩೦ ಹಾಸಿಗೆ ಹಾಗೂ ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ ಕನಿಷ್ಠ ೧೦ ಹಾಸಿಗೆಗಳ ಐಸಿಯು ಸಹಿತ ಮಕ್ಕಳ ವಿಶೇಷ ಕೋವಿಡ್ ವಾರ್ಡ್‌ಗಳನ್ನು ತೆರೆಯಬೇಕು. ಅಗತ್ಯ ಔಷಧಿ ದಾಸ್ತಾನುಗಳನ್ನು ಮಾಡಿಕೊಳ್ಳಬೇಕು. ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆಯಾಗಿರುವ ಕಾರಣ ಮುಚ್ಚಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ಕಾಯ್ದಿರಿಸಬೇಕು. ಅಗತ್ಯಬಿದ್ದರೆ ಮಕ್ಕಳು ಮತ್ತು ಮಕ್ಕಳ ಪಾಲಕರಿಗಾಗಿ ಈ ಕೇಂದ್ರಗಳನ್ನು ಬಳಸಿಕೊಳ್ಳಲು ಅಧಿಕಾರಿಳಿಗೆ ಸೂಚನೆ ನೀಡಿದರು.

ಆಗಸ್ಟ್ ೩೦ರೊಳಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ಜನರೇಟ್ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಅನುದಾನದಲ್ಲಿ ವ್ಯವಸ್ಥೆಮಾಡಿಕೊಳ್ಳಬೇಕು. ಈಗ ೪೮ ವೆಂಟಿಲೇಟರ್ ಲಭ್ಯವಿದ್ದು, ಸರ್ಕಾರ ಹಾಗೂ ದಾನಿಗಳಿಂದ ಪಡೆದು ಮೂರನೇ ಅಲೆಯ ಮುನ್ನ ಅಗಸ್ಟ ಅಂತ್ಯದೊಳಗೆ ೧೦೦ ವೆಂಟಿಲೇಟರ್ ಪಡೆಯುವ ಗುರಿ ಹೊಂದಲಾಗಿದೆ. ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ೧೩೫ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳಿದ್ದು, ಇವುಗಳ ಪ್ರಮಾಣ ಹೆಚ್ಚಿಗೆ ಮಾಡಲು ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳವಾಗಿದೆ. ಯಾವ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂಬುವುದನ್ನು ಆಡಿಟ್ ಮಾಡಲು ರಾಜ್ಯ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡಲಾಗಿದೆ. ಈ ತಂಡ ನೀಡುವ ವರದಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು. ವೆಂಟಿಲೇಟರ್‌ನಲ್ಲಿರುವ ಕೋವಿಡ್ ಪೇಸೆಂಟ್‌ಗಳ ಬಗ್ಗೆ ತೀವ್ರ ನಿಗಾವಹಿಸಿ ಪದೇ ಪದೇ ತಪಾಸಣೆ ಯಾರೊಬ್ಬರೂ ಸಾಯದಂತೆ ಕ್ರಮವಹಿಸಬೇಕು. ವೆಂಟಿಲೇಟರ್‌ನಲ್ಲಿರುವ ೨೧ ಜನರು ಬದುಕುಳಿಸಲು ಪ್ರಯತ್ನಮಾಡಿ. ಮುಂದಿನ ಮೂರು ತಿಂಗಳು ಕಳಕಳಿ, ಜವಾಬ್ದಾರಿ ಮಾನವೀಯ ಆಧಾರದ ಮೇಲೆ ಸೇವೆಮಾಡಿ ಜನರನ್ನು ಕೋವಿಡ್‌ನಿಂದ ಉಳಿಸುವ ಕೆಲಸಮಾಡಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉಪಸ್ಥಿತರಿದ್ದರು

Share this News
error: Content is protected !!