July 25, 2021

RANEBENNURU| ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿ; ಗ್ರಾಮ ಪಂಚಾಯಿತಿ ಮುಂದೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ.!

ಹಾವೇರಿ : ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ಅವರನ್ನು ಗ್ರಾಮದ ಬಳಿ ಎರಡು ಎಕರೆ ಜಮೀನಿನಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇವತ್ತು ಮೃತ ಮಹಿಳೆಯೊಬ್ಬಳನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಗ್ರಾಮದ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಕಾರಣಕ್ಕೆ ಪಂಚಾಯತಿ ಮುಂದೆ ಶವ ಸುಡಲು ಮೃತಳ ಕುಂಟುಂಬದವರು ಮುಂದಾಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಲ್ವತ್ತೈದು ವರ್ಷದ ಮಹಿಳೆ ಹನುಮವ್ವ ಅಣ್ಣಿಗೇರಿ ಎಂಬುವರು ಇವತ್ತು ಮೃತಪಟ್ಟಿದ್ದರು. ಮೃತಳ ಅಂತ್ಯಸಂಸ್ಕಾರಕ್ಕೆ ಮೃತಳ ಸಂಬಂಧಿಕರು ಸಿದ್ಧತೆ ಮಾಡಲು ಸ್ಮಶಾನಕ್ಕೆ ಕಟ್ಟಿಗೆ ತಗೆದುಕೊಂಡು ಹೋಗುತ್ತಿದ್ದರು. ಆಗ ವ್ಯಕ್ತಿಯೋರ್ವ ಮೃತಳ ಕುಟುಂಬದವರಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸ್ಮಶಾನ ನಮ್ಮ ಹೆಸರಿನಲ್ಲಿದೆ, ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ಅಡ್ಡಿಪಡಿಸಿದ್ದಾನೆ. ಇದರಿಂದ ‌ಕಂಗಾಲಾದ ಮೃತಳ ಕುಟುಂಬಸ್ಥರು ಗ್ರಾಮ ಪಂಚಾಯತಿ ಮುಂದೆ ಅಂತ್ಯಸಂಸ್ಕಾರ ಮಾಡಲು‌ ಮುಂದಾಗಿದ್ದಾರೆ.

ಮೃತಳ ಅಂತ್ಯಸಂಸ್ಕಾರ ಮಾಡಲು ಸಿದ್ದತೆ ಮಾಡುತ್ತಿರುವ ವಿಷಯ ತಿಳಿದ ಗ್ರಾಮದ ವ್ಯಕ್ತಿಯೊಬ್ಬ ದಾರಿಗೆ ದೊಡ್ಡದಾದ ಗುಂಡಿ ತೋಡಿ, ಗುಂಡಿಗೆ ನೀರು ತುಂಬಿಸಿ ಅಡ್ಡಿ ಮಾಡಿದ್ದಾನೆ. ಹೀಗಾಗಿ ಮೃತಳ ಕುಟುಂಬದವರು ಗ್ರಾಮ ಪಂಚಾಯಿತಿ ಕಚೇರಿ‌ ಮುಂದೆ ಕಟ್ಟಿಗೆ ಇಟ್ಟು ಅಂತ್ಯಸಂಸ್ಕಾರ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ‌ ಪೋಲಿಸರು ಮೃತಳ ಕುಟುಂಬಸ್ಥರು ಹಾಗೂ ಅಡ್ಡಿಪಡಿಸಿದ ವ್ಯಕ್ತಿಗೆ ಪಂಚಾಯಿತಿ ಮುಂದೆ ಅಂತ್ಯಸಂಸ್ಕಾರ ಮಾಡದಂತೆ ಮತ್ತು ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಮನವೊಲಿಸುತ್ತಿದ್ದಾರೆ.

Share this News
error: Content is protected !!