July 25, 2021

ಪೋಷಣ ಅಭಿಯಾನ: ಪೌಷ್ಠಿಕ ಕೈತೋಟ ನಿರ್ಮಾಣಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ.!

ಹಾವೇರಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಟ ಪಾಠಗಳೊಂದಿಗೆ ಅಂಗನವಾಡಿ ಆವರಣದಲ್ಲಿ ಕೈತೋಟ ನಿರ್ಮಿಸಿ ಪೌಷ್ಠಿಕಾಂಶ ಆಹಾರದ ಬಗ್ಗೆ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳುವಳಿಕೆ ನೀಡಬೇಕು ಎಂದು ಶಾಸಕರು, ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಅವರು ಹೇಳಿದರು.

“ಪೋಷಣ ಅಭಿಯಾನ” ಯೋಜನೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಂಗವಾಗಿ ಅಂಗನವಾಡಿ ಕೇಂದ್ರಗಳಲ್ಲಿ “ಪೌಷ್ಠಿಕ ಕೈತೋಟ” ನಿರ್ಮಾಣಕ್ಕೆ ಬೀಜಗಳ ಬಿತ್ತನೆ ಕಾರ್ಯಕ್ರಮಕ್ಕೆ ಇಜಾರಿಲಕ್ಮಾಪುರ ಅಂಗನವಾಡಿ ಕೇಂದ್ರ-185ರಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಆಕ್ಸಿಜನ್ ಪ್ರಮಾಣ ಹೆಚ್ಚುತ್ತದೆ ಹಾಗೂ ವಾತಾವರಣವು ಉತ್ತಮವಾಗಿರುತ್ತದೆ. ಸ್ವಚ್ಛ ಹಾಗೂ ಸುಂದರ ಪರಿಸರ ಎಲ್ಲ ಋತುಮಾನಗಳಿಗೂ ಆರೊಗ್ಯಯುತ ಜೀವನಕ್ಕೆ ಉಪಯುಕ್ತವಾಗುತ್ತದೆ ಎಂದು ಹೇಳಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಶೈಲಾ ಜಿ ಕುರಹಟ್ಟಿ ಅವರು ಮಾತನಾಡಿ, ತಾಲೂಕಿನ 283 ಅಂಗನವಾಡಿ ಕೇಂದ್ರಗಳಿಗೆ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಕೆಂದ್ರ ಸರ್ಕಾರದ ವತಿಯಿಂದ ನ್ಯಾಷನಲ್ ಸೀಡ್ಸ್ ಪೆಡರೇಶನ್ ವತಿಯಿಂದ ಬೀಜಗಳನ್ನು ಪೋಸ್ಟ್‍ಗಳ ಮೂಲಕ ಪೂರೈಸಿದ್ದು, ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು, ಮಹಿಳಾ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

____

Share this News
error: Content is protected !!