July 25, 2021

ಸಪ್ತಪದಿ ಯೋಜನೆ; ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಸಿದ್ಧತೆಗೆ ಸೂಚನೆ. -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ.!

ಹಾವೇರಿ: ಜಿಲ್ಲೆಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆಮಾಡಿಕೊಳ್ಳುವಂತೆ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಧಾರ್ಮಿಕ ಪರಿಷತ್ ಸಭೆ ಹಾಗೂ ಧಾರ್ಮಿಕ ದತ್ತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಇಳಿಮುಖವಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯಂತೆ ಸಪ್ತಪದಿ ಸರಳವಿವಾಹ ಆಯೋಜನೆಗೆ ಕುರಿತಂತೆ ಜಿಲ್ಲೆಯ ಬೇರೆ ಬೇರೆ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಆದೇಶದ ನಂತರ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೇವಾಲಯ ಹಾಗೂ ಜೀರ್ಣೋದ್ಧೋರಕ್ಕಾಗಿ ಯೋಜಿಸಲಾದ ೧.೫೦ ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಮಾರ್ಗಸೂಚಿಯಂತೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಿ. ಹೊಸ ದೇವಾಲಯಗಳ ನಿರ್ಮಾಣ, ಸಭಾಭವನ, ದೇವಾಲಯಗಳಿಗೆ ರಸ್ತೆ, ಕುಡಿಯುವ ನೀರು, ಆವರಣ ಗೋಡೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಸಮಿತಿಗೆ ಸಲ್ಲಿಕೆಮಾಡಿದರೆ ತಕ್ಷಣ ಅನುಮೋದನೆ ನೀಡುವುದಾಗಿ ಹೇಳಿದರು.

Share this News
error: Content is protected !!