July 25, 2021

ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ 65 ಕೋಟಿ; ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 14.33 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ.!

ಬೆಂಗಳೂರು – ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕಾಗಿನೆಲೆಗೆ ಒಟ್ಟು 14. 33 ಕೋಟಿ ರೂಪಾಯಿ ವೆಚ್ಚದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು.

2021- 22 ನೇ ಸಾಲಿಗೆ ಅನ್ವಯವಾಗುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕಾಗಿನೆಲೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ವಸ್ತುಸಂಗ್ರಹಾಲಯದ ಮುಂದುವರಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು, ಬಾಡ ಗ್ರಾಮದಲ್ಲಿ ಸಂಗೀತ ಕಾರಂಜಿ ಹಾಗೂ ಕನಕದಾಸರ ಅರಮನೆಯ ದರ್ಬಾರ್ ಹಾಲ್ ನಲ್ಲಿ ದಾಸಕೂಟ ಸಂಯೋಜನೆ, ಕನಕದಾಸರ ಕುರಿತು ಹಾಲೋಗ್ರಾಂ ಚಲನಚಿತ್ರ ನಿರ್ಮಾಣ ಕಾಮಗಾರಿಗಳ ಕ್ರಿಯಾಯೋಜನೆಗೆ ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ 65 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗೆ ಇಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅನುಮೋದನೆ ನೀಡಿದರು.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ಕಾಮಗಾರಿ, ರಾಕ್ ಗಾರ್ಡನ್ ನಿರ್ಮಾಣ, ಕಲ್ಯಾಣ ಮಂಟಪ ನವೀಕರಣ, ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಮ್ಯೂಜಿಯಂ ವೀರಭೂಮಿ ನಿರ್ಮಾಣ ಕಾಮಗಾರಿ, ರಾಯಣ್ಣನ ಕೆರೆ ಅಭಿವೃದ್ಧಿ ಮಾಡುವ ಕಾಮಗಾರಿಗಳಿಗಾಗಿ ಈ ಹಣವನ್ನು ವಿನಿಯೋಗಿಸುವಂತೆ ಸೂಚಿಸಲಾಯಿತು.

__________

Share this News
error: Content is protected !!