July 25, 2021

Challenging star Darshan| ನೆಮ್ಮದಿ ಅರಸಿ ಬ್ಯಾಡಗಿಗೆ ಬಂದ ಭೂಪತಿ; ಅಭಿಮಾನಿಗಳಿಗೆ ಸಿಕ್ತು ಲಾಠಿ ರುಚಿ.!

ಹಾವೇರಿ: ಇತ್ತೀಚಿನ ಕೆಲವು ವಿವಾದಗಳಿಂದ ಹಾಗೂ ಅರುಣಾ ಕುಮಾರಿ ಮತ್ತು ಇಂದ್ರಜಿತ್ ಪ್ರಕರಣಗಳಿಂದ ಬೇಸತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಬಿಡುಬಿಟ್ಟು ಇಂದು ಬೆಂಗಳೂರಿಗೆ ತೆರಳಿದರು. ಬ್ಯಾಡಗಿಯಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡ ಪಾಟೀಲ್ ಅವರ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದು ಬುಧವಾರ ಬೆಳಿಗ್ಗೆ ವಾಪಾಸ್ ಬೆಂಗಳೂರಿಗೆ ಮರಳಿದ್ದಾರೆ.

ತಮ್ಮ ಆಗಮನ ಯಾವುದೇ ಸುಳಿವು ನೀಡದ ದರ್ಶನ ಸೋಮವಾರ ಬ್ಯಾಡಗಿಗೆ ಆಗಮಿಸಿದ್ದರು. ಬ್ಯಾಡಗಿ ಸಮೀಪದ ಗುಮ್ಮನಹಳ್ಳಿ ರಸ್ತೆಯಲ್ಲಿರುವ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ಗಾರ್ಮೆಂಟ್ ಬಳಿಯ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಟ ದರ್ಶನ್ ವಾಯುವಿಹಾರ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ವಾಯುವಿಹಾರದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ನಟ ದರ್ಶನ ಅವರು ವಾಯುವಿಹಾರ ಮಾಡುತ್ತಿರುವ ವಿಡಿಯೋ ನೋಡಿ, ಚಾಲೆಂಜಿಂಗ್ ಸ್ಟಾರ್  ಬ್ಯಾಡಗಿಗೆ ಆಗಮಿಸಿರುವ ಸುದ್ದಿ ಅಭಿಮಾನಿಗಳಿಗೆ ಗೊತ್ತಾಗಿದೆ.

ಭೂಪತಿ ಬ್ಯಾಡಗಿಗೆ ಆಗಮಿಸಿರುವ ಕುರಿತು ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಅಭಿಮಾನಿಗಳು ವಿಶ್ರಾಂತಿ ಗೃಹದ ಸುತ್ತ ನೆರೆದಿದ್ದರು. ನೆಚ್ಚಿನ ನಟ ಡಿಬಾಸ್ ದರ್ಶನರವರನ್ನು ನೋಡಲು ಅಭಿಮಾನಿಗಳ ಜನಸಾಗರವೇ ಸೇರಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವಂತಹ ಪರಿಸ್ಥಿತಿ ಒಂದು ಕ್ಷಣ ಏರ್ಪಟ್ಟಿತ್ತು. ಪೊಲೀಸರು ಲಾಠಿ ಬಿಸುವ ಮೂಲಕ ಭೂಪತಿಯ ಅಭಿಮಾನಿಗಳನ್ನು ದೂರ ಸರಿಸುವಂತಾಯಿತು.

ಇಂದು ಮೂರನೇಯ ದಿನ ಬುಧವಾರ  ಬೆಳಿಗ್ಗೆ ನಟ ದರ್ಶನ್ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರ ಮನೆಯಲ್ಲಿ ಉಪಹಾರ ಸೇವಿಸಿದರು. ಈ ವೇಳೆ ಮಾಜಿ ಶಾಸಕ ಸುರೇಶಗೌಡ ಮತ್ತು ಕುಟುಂಬಸ್ಥರು ನಟ ದರ್ಶನ್‌ಗೆ ಮೈಸೂರು ಪೇಟ ತೊಡಿಸಿ ಗೌರವಿಸಿದರು.

ಈ ಕುರಿತು ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್, ನಟ ದರ್ಶನ್ ವಿಶ್ರಾಂತಿಗಾಗಿ ನಮ್ಮ ಅತಿಥಿಯಾಗಿ ಇಲ್ಲಿಗೆ ಬಂದಿದ್ದರು. ಮೈಸೂರು ಮತ್ತು ಬೆಂಗಳೂರು ಕಡೆ ಕಿರಿಕಿರಿಯಾಗಬಹುದು ಎಂದು ನಮ್ಮ ಅತಿಥಿಗೃಹಕ್ಕೆ ಆಗಮಿಸಿದ್ದರು. ಸೋಮವಾರ ಆಗಮಿಸಿದ್ದ ದರ್ಶನ್ ಅತಿಥಿ ಗೃಹದಲ್ಲಿ ತಂಗಿದ್ದರು. ಇವತ್ತು ಮನೆಯಲ್ಲಿ ಉಪಹಾರ ಸೇವಿಸಿ ಬೆಂಗಳೂರಿಗೆ ತೆರಳಿದ್ದಾರೆ ಎಂದರು.

ಈ ಮಧ್ಯೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಲ್ಲಿದ್ದ ಇಂದ್ರಜಿತ್ ಲಂಕೇಶ್ ಹಾಗೂ ನಟ ದರ್ಶನ್ ವಾಕ್ಸಮರ ಇದೀಗ ತಣ್ಣಗಾಗಿದೆ. ಒತ್ತಡ ಮರೆಯಲು ದರ್ಶನ್ ಎರಡು ದಿನಗಳ ಕಾಲ ಬ್ಯಾಡಗಿಯಲ್ಲಿ ವಿಶ್ರಾಂತಿ ಪಡೆದು ಮೂರನೆ ದಿನವಾದ ಇಂದು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರ ಅತಿಥಿಗೃಹದಿಂದ ಬೆಂಗಳೂರಿಗೆ ತೆರಳಿದ್ದಾರೆ.

Share this News
error: Content is protected !!