ಬಿಸಿ ಸುದ್ದಿ
October 18, 2021

ಕಣ್ಮುಚ್ಚಿ ಕುಳಿತಿರುವ ಪೊಲೀಸ ಇಲಾಖೆ; ಸಿಎಂ‌ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಮಕ್ಕಳ ಬಳಕೆ.!

 

ರಾಣೆಬೆನ್ನೂರ (ಸುದ್ದಿತರಂಗ ಸೆ,27) – ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ಅಕ್ರಮ ಮರಳುಗಾರಿಕೆ ದಿನ ನಿತ್ಯ ನಡೆಯುತ್ತಿರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಆಘಾತಕಾರಿ ಅಂಶವೆಂದರೆ ಅಕ್ರಮ‌ ಮರಳು ದಂಧೆಕೋರರು ಅಕ್ರಮ ಮರಳುಗಾರಿಕೆಯಲ್ಲಿ ಶಾಲೆ ಕಲಿಯುವ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಂಡು ಬಂದಿದೆ.

ಹೌದು ರಾಣೆಬೇನ್ನೂರ ತಾಲೂಕಿನ ಚಿಕ್ಕಕುರವತ್ತಿ, ಹರನಗಿರಿ, ಮೇಡ್ಕರಿ ಭಾಗದಲ್ಲಿ ಹಾಡುಹಗಲೇ ಎತ್ತಿನ ಗಾಡಿಯ ಮೂಲಕ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ. ಆದರೆ ದಂಧೆಕೋರರು ತಾವು ಮಾಡುವುದರ ಜತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರ ಬದಲಾಗಿ ಅಕ್ರಮ ಮರಳುಗಾರಿಕೆ ಬಳಸಿಕೊಳ್ಳುವ ದೃಶ್ಯ ಕಂಡು ಬರುತ್ತಿದೆ.

ಚಿಕ್ಕಕುರವತ್ತಿ ಗ್ರಾಮದ ಭಾಗದಲ್ಲಿ ಭಾನುವಾರದಂದು ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಎತ್ತಿನ ಗಾಡಿ ಮೂಲಕ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಕುರಿತು ಸ್ಥಳೀಯರೊಬ್ಬರು ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಎತ್ತಿನಗಾಡಿ ತಡೆದು ಪಾಲಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.

ಅಕ್ರಮ ಮರಳುಗಾರಿಕೆ ಕಾನೂನು ಬಾಹಿರವಾಗಿದ್ದು, ಅಲ್ಲದೆ ಶಾಲೆ ಕಲಿಯುವ ಮಕ್ಕಳನ್ನು ಅಕ್ರಮ ಮರಳುಗಾರಿಕೆಗೆ ಬಳಸಿಕೊಳ್ಳುವುದು ತಪ್ಪುಎಂದು ಪಾಲಕರಿಗೆ ತಿಳಿಸಿದ್ದಾರೆ.

ಕಣ್ಮುಚ್ಚಿ ಕುಳಿತಿರುವ ಪೊಲೀಸ ಇಲಾಖೆ.!

ತಾಲೂಕಿನ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ದಿನ ನಿತ್ಯ ನೂರಾರು ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಟ ಮಾಡಲಾಗುತ್ತಿದೆ. ಆದರೆ ರಾಣೇಬೆನ್ನೂರು ಗ್ರಾಮಾಂತರ ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.

ಮೂಕಪ್ರಾಣಿಯಾದ ಎತ್ತುಗಳನ್ನು ವ್ಯವಸಾಯಕ್ಕೆ ಬಳಸುವ ಬದಲು ದಂಧೆಕೋರರು ಅಕ್ರಮ ಮರಳುಗಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ತಾಲೂಕಿನ ಕೋಣನತಂಬಿಗೆ ಗ್ರಾಮದಲ್ಲಿ ಎತ್ತಿನ ಲಾರಿಯ ಮೂಲಕ ಮರಳು ತರಲು ಹೋಗಿ ಎರಡು ಎತ್ತು ಹಾಗೂ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿತ್ತು. ಇಂತಹ ಅನಾಹುತಗಳು ನಡೆದಿದ್ದು ಗೊತ್ತಿದ್ದರೂ ಪೊಲೀಸರು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ರೈತ ಮುಖಂಡ ರವೀಂದಗೌಡ ಪಾಟೀಲ ಆರೋಪಿಸಿದ್ದಾರೆ.

Share this News
error: Content is protected !!