ಬಿಸಿ ಸುದ್ದಿ
October 20, 2021

ಹಾನಗಲ್ ಉಪಚುನಾವಣೆ| ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಶುರುವಾದ ಅಸಮಾಧಾನ; ಟಿಕಟ್ ಗಾಗಿ ನಡೆಯುತ್ತಿದೆ ತೆರೆಮರೆಯ ಕಸರತ್ತು.!

ಹಾನಗಲ್ (ಸುದ್ದಿತರಂಗ ಸೆ,29) – ಮಾಜಿ ಸಚಿವರು ಹಾಗೂ ಶಾಸಕರಾಗಿದ್ದ ಸಿ.ಎಂ.ಉದಾಸಿಯವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ.


ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ತೆರೆಮರೆಯಲ್ಲಿ ಆಕಾಂಕ್ಷಿಗಳು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ, ಪ್ರಕಾಶಗೌಡ ಪಾಟೀಲ, ಸೋಮಶೇಖರ ಕೋತಂಬ್ರಿ, ಬಿ.ಕೆ.ಮೋಹನಕುಮಾರ ಸೇರಿದಂತೆ ಹಲವು ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ.


ಇತ್ತ ಬಿಜೆಪಿ ಪಕ್ಷದಲ್ಲಿಯೂ ಕೂಡ ಹಾಲಿ ಸಂಸದರಾಗಿರುವ ಶಿವಕುಮಾರ ಉದಾಸಿಯವರ ಪತ್ನಿ ಶ್ರೀಮತಿ ರೇವತಿ ಉದಾಸಿ, ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಿಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವರು ಟಿಕೆಟ್ ಗಾಗಿ ತಮ್ಮ ತಮ್ಮ ನಾಯಕರ‌ ಮೂಲಕ ಲಾಭಿ ನಡೆಸಿದ್ದಾರೆ.

ಈಗಾಗಲೇ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತಮ್ಮ ಅಭ್ಯರ್ಥಿಯಾಗಿ ನಿಯಾಜ್ ಶೇಖ ಎಂಬುವವರ ಹೆಸರನ್ನು ಘೋಷಣೆ ಮಾಡಿದೆ.

ಒಟ್ಟಿನಲ್ಲಿ ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ರಣಕಹಳೆ ಊದಲಾಗಿದೆ. ಅಂತಿಮ ಹಂತದ ಚುನಾವಣಾ ರಣಕಣದಲ್ಲಿ ದುಮುಕುವುದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

______

Share this News
error: Content is protected !!