June 22, 2021

ಒಂದು ವರ್ಷದೊಳಗೆ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. -ಬಿ.ಎಸ್.ಯಡಿಯೂರಪ್ಪ

ದಾವಣಗೆರೆ – ಒಂದು ವರ್ಷದೊಳಗೆ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ .

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ್ ಅವರ 282 ನೇ ಜಯಂತ್ಯುತ್ಸವ ಮಾತನಾಡಿದ ಅವರು, ಕಂದಾಯ ಪ್ರಕ್ರಿಯೆ ಚುರುಕುಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಷ ಇಲ್ಲಿ ನಡೆಯುವ ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ಆಗಮಿಸುವ ವೇಳೆಗೆ ಕಂದಾಯ ಗ್ರಾಮದ ಬೇಡಿಕೆ ಈಡೇರಲಿದೆ ಎಂದು ಭರವಸೆ ನೀಡಿದರು.

ಅಳಿವಿನ ಅಂಚಿನಲ್ಲಿರುವ ಬಂಜಾರ ಭಾಷೆಯನ್ನು ಉಳಿಸಲು ಅಗತ್ಯ ಶಿಫಾರಸು ಮಾಡುವಂತೆ ಡಾ. ಹಂಪಾ ನಾಗರಾಜಯ್ಯ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ ಎಂದರು.

ಬಂಜಾರ ಭಾಷೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ಬಂಜಾರ ಭಾಷಾ ಅಕಾಡೆಮಿ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ.ಹುಮ್ನಾಬಾದ್ ತಾಲೂಕು ಲಾಲಾಧರಿ ಪ್ರದೇಶದಲ್ಲಿ 34 ಎಕರೆಯಲ್ಲಿ ಲಂಬಾಣಿ ಕರಕುಶಲ ಸಿದ್ಧ ಉಡುಪುಗಳ ತಯಾರಿಕಾ ಘಟಕ ಸ್ಥಾಪನೆಗೆ ಮಂಜೂರು ಮಾಡಲಾಗಿದೆ ಎಂದರು

ಕೊಪ್ಪಳದ ಬಹದ್ದೂರ್ ಬಂಡಿಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ 50 ಕೋಟಿ ವೆಚ್ಚದಲ್ಲಿ ಪರಿಸರ ಗ್ರಾಮವನ್ನಾಗಿ ಮಾಡುವ ಉದ್ದೇಶವಿದೆ ಎಂದರು. ಲಂಬಾಣಿ ಜನಾಂಗದವರ ವಲಸೆ ತಪ್ಪಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಂಡಾ ರೋಜಗಾರ್ ಮಿತ್ರ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ
ಸಚಿವರಾದ ಬಿ. ಶ್ರೀರಾಮುಲು, ಪ್ರಭು ಚವ್ಹಾಣ್, ಭೈರತಿ ಬಸವರಾಜ್, ಆರ್. ಶಂಕರ್, ಸಂಸದರಾದ ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಅಶೋಕ್ ನಾಯಕ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ಮಾಜಿ ಸಚಿವ ರುದ್ರಪ್ಪ ಲಮಾಣಿ ಭಾಗವಹಿಸಿದ್ದರು.

Share this News
error: Content is protected !!