June 22, 2021

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಐದು ಪ್ಯಾರಾ ಮೆಡಿಕಲ್ ಕೋರ್ಸ್‍ಗಳ ಆರಂಭ -ಶಾಸಕ ನೆಹರು ಓಲೇಕಾರ

ಹಾವೇರಿ:- ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಐದು ಪ್ಯಾರಾ ಮೆಡಿಕಲ್ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ಅನುಸೂಚಿತ ಜಾತಿ ಹಾಗೂ ಅನುಸೂಚಿ ಪಂಗಡಗಳ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ ಅವರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಯಾಬೋರೋಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಎಕ್ಸ-ರೇ ಟೆಕ್ನಾಲಜಿ, ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‍ಪೆಕ್ಟರ್, ಡಿಪ್ಲೋಮಾ ಇನ್ ಅಪರೇಷನ್ ಥೇಯೆಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ ಹಾಗೂ ಡಿಪ್ಲೋಮಾ ಅಪ್ತಾಮಿಕ್ ಟೆಕ್ನಾಲಜಿ ಕೋಸ್‍ಗಳು ಆರಂಭವಾಗಲಿವೆ. ಮೆಡಿಕಲ್ ಕಾಲೇಜ್ ಆರಂಭಕ್ಕೆ ಬಹಳ ಅವಶ್ಯವಿರುವ ಕೋರ್ಸ್‍ಗಳು ಇದಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಈ ಕೋರ್ಸ್‍ಗಳ ಆರಂಭದಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರತಿ ಕೋರ್ಸ್‍ಗೆ 20 ಜನರಿಗೆ ಪ್ರವೇಶಾವಕಾಶವಿದೆ. ಆನ್‍ಲೈನ್ ಮೂಲಕ ಈಗಗಾಲೇ ಅರ್ಜಿ ಕರೆಯಲಾಗಿದೆ. ಬೆಂಗಳೂರಿನಿಂದ ಪ್ಯಾರಾಮೆಡಿಕಲ್ ಬೋರ್ಡ್‍ನಿಂದ ಇದೇ ಫೆಬ್ರುವರಿ 3ನೇ ವಾರದಲ್ಲಿ ಪ್ರವೇಶ ಕೌನ್ಸಲಿಂಗ್ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಪ್ರವೇಶಕ್ಕೆ ಹಾವೇರಿ ಪ್ಯಾರಾಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಡಲಿದ್ದಾರೆ ಎಂದು ಹೇಳಿದರು.

ಈ ಕೋರ್ಸ್‍ಗಳ ಪ್ರವೇಶಕ್ಕೆ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳು ಲಭ್ಯವಾಗದಿದ್ದರೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎರಡು ವರ್ಷ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೂರು ವರ್ಷ ಅವಧಿಯ ತರಬೇತಿ ಇದಾಗಿದೆ. ಮೆರಟಿ ಮತ್ತು ರೋಸ್ಟರ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 15 ರಿಂದ 35 ವರ್ಷ ಹಾಗೂ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ 15 ರಿಂದ 45 ವರ್ಷದೊಳಗಿರಬೇಕು. ಪ್ರತಿ ವರ್ಷಕ್ಕೆ ಪ್ರತಿ ವಿದ್ಯಾರ್ಥಿಗೆ ನಾಲ್ಕು ಸಾವಿರ ರೂ. ಶುಲ್ಕ ನಿಗಧಿಪಡಿಸಲಾಗಿದೆ.
ಪ್ಯಾರಾ ಮೆಡಿಕಲ್ ಕೋರ್ಸ್ ಮಂಜೂರು ಮಾಡಿರುವುದರಿಂದ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಕೂಲವಾಗಲಿದೆ. ನೂತನ ಪ್ಯಾರಾಮೆಡಿಕಲ್ ಕಾಲೇಜಿಗೆ ಹಂತಹಂತವಾಗಿ ಅವಶ್ಯವಿರುವ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲಾಗುವುದು. ತಾತ್ಕಾಲಿಕವಾಗಿ ಪರ್ಯಾಯ ಸಿಬ್ಬಂದಿಗಳನ್ನು ನಿಯೋಜಿಸಿ ತರಗತಿ ನಡೆಸಲಾಗುವುದು ಎಂದು ತಿಳಿಸಿದರು.

ಮೆಡಿಕಲ್ ತರಗತಿ ಆರಂಭ: ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಥಮ ವರ್ಷದ ತರಗತಿಗಳು ಈ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿವೆ. ತಾತ್ಕಾಲಿಕವಾಗಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಲ್ಯಾಬ್ ಮತ್ತು ಇತರ ತರಗತಿ ನಡೆಸಲು ಜಿಲ್ಲಾ ಆಸ್ಪತ್ರೆಯ ಮಹಡಿಯ ಮೇಲೆ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ನಡೆಸಲಾಗಿದೆ ಎಂದು ತಿಳಿಸಿದರು.

ನರ್ಸಿಂಗ್ ಕಾಲೇಜ್: ನರ್ಸಿಂಗ್ ಕಾಲೇಜಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಹೊಸದಾಗಿ ಸರ್ಕಾರಿ ಟೂಲ್ ರೂಂ ಮತ್ತು ತರಬೇತಿ ಕೇಂದ್ರ (ಜಿಟಿಡಿಸಿ) ಕಾಲೇಜ್ ಆರಂಭಿಸಲಾಗುವುದು. ನವೋದಯ ಶಾಲೆ ಆರಂಭಕ್ಕೆ ಹೊಸರಿತ್ತಿಯಲ್ಲಿ ಜಾಗ ಗುರುತಿಸಲಾಗಿದೆ. ಸರ್ಕಾರಿ ಕಾನೂನು ಕಾಲೇಜಿಗೆ ಐದು ಕೋಟಿ ರೂ. ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು, ಟ್ರಾಮಾ ಸೆಂಟರ್‍ಗೆ ಜಾಗ ಗುರುತಿಸಲಾಗಿದೆ ಹಾಗೂ ಒನ್ ಸ್ಟಾಫ್ ಸೆಂಟರ್ ಸೇರಿದಂತೆ ಹಲವು ಶೈಕ್ಷಣಿಕ ಸರ್ಕಾರಿ ಕೋರ್ಸ್‍ಗಳು, ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಮೂಲ ಸೌಕರ್ಯ: ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಆರ್.ಟಿ.ಪಿಸಿ.ಆರ್ ಲ್ಯಾಬ್ ಆರಂಭಿಸಲಾಗಿದೆ. ಐದು ಲಕ್ಷ ರೂ.ಅನುದಾನದಲ್ಲಿ ಬ್ಲೆಡ್ ಬ್ಯಾಂಕ್ ಕೋಚ್ ಆರಂಭಿಸಲಾಗಿದೆ. ಆರುಸಾವಿರ ಕೆಜಿ ಸಾಮಥ್ರ್ಯದ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗಿದೆ. 22 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮಹಡಿಯ ಮಟ್ಟಡ ನಿರ್ಮಾಣ ಹಾಗೂ 25 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒನ್ ಸ್ಪಾಫ್ ಸೆಂಟರ್ ಆರಂಭಿಸಲು ಕ್ರಮವಹಿಸಲಾಗಿದೆ. ಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ತರಗತಿಗಳನ್ನು ಆರಂಭಿಸಲು ಬೇಕಾದ ಎಲ್ಲ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಅಭಿನಂದನೆ: ಜಿಲ್ಲೆಗೆ ನೂತನ ಸರ್ಕಾರಿ ಪ್ಯಾರಾಮೆಡಿಕಲ್ ಕಾಲೇಜು ಆರಂಭಿಸಲು ಮಂಜೂರಾತಿ ನೀಡಿ ಐದು ಹೊಸ ಕೋರ್ಸ್‍ಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲು ಅನುಮತಿ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ರಾ.ಹಾವನೂರ, ನರ್ಸಿಂಗ್ ಕಾಲೇಜ್ ಉಪ ಪ್ರಾಂಶುಪಾಲ ವಿನಾಯಕ ಕುಲಕರ್ಣಿ ಇತರರು ಉಪಸ್ಥಿತರಿದ್ದರು.

Share this News
error: Content is protected !!