July 25, 2021

ಓದು ಪರೀಕ್ಷೆಗಷ್ಟೇ ಸೀಮಿತವಾಗದೇ ಬದುಕಿಗೆ ಪೂರಕವಾಗಬೇಕು – ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ – ಪರೀಕ್ಷಾ ದೃಷ್ಠಿಕೋನದಿಂದ ಮಾತ್ರ ವಿದ್ಯಾರ್ಥಿಗಳು ಪಠ್ಯವನ್ನು ಓದದೇ ತಮ್ಮ ಬದುಕಿನ ಕಟ್ಟುವಿಕೆಯ ನಿಟ್ಟಿನಲ್ಲಿ ಪೂರಕವಾಗುವಂತೆ ಓದುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದ್ದಾರೆ.

ಅವರು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ 2020-21 ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಯಾಂತ್ರಿಕ ಜಗತ್ತಿನ ಜೊತೆಗೆ ಹೆಜ್ಜೆ ಹಾಕುತ್ತಿರುವ ಇಂದಿನ ಜನತೆ ಕೇವಲ ಮೊಬೈಲ್, ನೆಟ್, ಇನ್ನುಳಿದ ಮಾಧ್ಯಮಗಳಲ್ಲಿ ತಲ್ಲೀನರಾಗಿರುವುದು ಅವರ ಭವಿಷ್ಯತ್ತಿನ ಹಿತದೃಷ್ಠಿಯಿಂದ ಮಾರಕವಾಗಬಹುದು. ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡು ಪರಿಪೂರ್ಣ ಜ್ಞಾನ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡರೆ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯವಾಗುವುದು. ಪರೀಕ್ಷೆಗಳು ಮನುಷ್ಯನ್ನು ಒರೆಗೆ ಹಚ್ಚುವ ಕಲ್ಲುಗಳಿದ್ದಂತೆ ಯಶಸ್ವಿಯಾದವರಿಗೆ ಸಾಧನೆ ಕಟ್ಟಿಟ್ಟದ್ದು. ಬೇಕಾದಷ್ಟು ಅವಕಾಶಗಳು ಇರುವ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಪ್ರತಿಭಾ ಶಕ್ತಿಯಿಂದ ಜೀವನ ನಿಭಾಯಿಸಬಹುದಾಗಿದೆ. ಸಮಯದ ಸದ್ಭಳಕೆ, ಬದುಕಿನ ಕ್ರಮ, ಪರಸ್ಪರ ಗೌರವ ಇಟ್ಟುಕೊಂಡು ಉತ್ತಮ ಪ್ರಜೆಗಳಾಗಬೇಕಿದೆ. ಸಂಶೋಧನೆ ಮತ್ತು ನವೀನ ಆವಿಷ್ಕಾರಗಳನ್ನು ತಿಳಿದು ಅವುಗಳ ಪ್ರಯೋಜನ ಮತ್ತು ಬಳಕೆಯ ಅಗತ್ಯವಿದೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಉಪಯುಕ್ತ ರಂಗಗಳನ್ನು ಆಯ್ದುಕೊಂಡು ಸಂಪದ್ಭರಿತ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ವೇದಿಕೆಯಲ್ಲಿ ಸ್ಥಾನಿಕ ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಎಸ್. ಜೆ. ಹೆರೂರ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಡಿ. ಎ. ಕೊಲ್ಲಾಪುರೆ ಸ್ವಾಗತಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರೂಪಿಸಿದರು. ಡಾ. ಬಿ. ಎನ್. ವಾಸುದೇವನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share this News
error: Content is protected !!