July 25, 2021

ಫೆ.24 ರಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪ್ರವೇಶ ಪರೀಕ್ಷೆಗೆ ಸೂಚನೆ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ -ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಜಿಲ್ಲೆಯಲ್ಲಿ ಇದೇ ಫೆಬ್ರುವರಿ 24 ರಂದು ನಡೆಯುವ ಪ್ರವೇಶ ಪರೀಕ್ಷೆಯನ್ನು ವಿಶೇಷವಾಗಿ ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸುವ್ಯವಸ್ಥಿತವಾಗಿ ಹಾಗೂ ಯಾವುದೇ ಲೋಪದೋಷವಾಗದಂತೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಕುರಿತು ಎಲ್ಲ ತಾಲೂಕಾ ಆಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳನ್ನು ಆಯಾ ಸ್ಥಳೀಯ ನಗರ ಸಂಸ್ಥೆಗಳಿಂದ ಪರೀಕ್ಷೆಯ ಹಿಂದಿನ ದಿನ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಬೇಕು. ಆಯಾ ತಾಲೂಕಾ ತಹಶೀಲ್ದಾರಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಜ್ವರ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಶ್ನೆ ಪತ್ರಿಕೆ ರವಾನೆಗೆ ಸೂಕ್ತ ಕ್ರಮವಹಿಸಬೇಕು ಹಾಗೂ ಪ್ರತಿ ಕೇಂದ್ರಗಳಿಗೆ ಎರಡು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಅದರಲ್ಲಿ ಒಬ್ಬರು ಮಹಿಳಾ ಪೇದೆಯನ್ನು ನಿಯೋಜಿಸಬೇಕು ಹಾಗೂ ಎರಡು ಜನ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಪರೀಕ್ಷೆ ಅವಧಿ ಮುಗಿದ ನಂತರ ಎಲ್ಲ ಒ.ಎಂ.ಆರ್.ಗಳನ್ನು ಪೊಲೀಸ್ ಬಂದೋಸ್ತ್‍ನಲ್ಲಿ ಖಜಾನೆಗೆ ತಲುಪಿಸಬೇಕು ಎಂದು ಸೂಚನೆ ನೀಡಿದರು.


ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ ಹಾಗೂ ಝರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮೊಬೈಲ್, ಬೂಟೂತ್, ಪೇಜರ್, ವೈರಲೆಸ್ ಸೆಟ್, ಲಾಗ್ ಟೇಬಲ್, ಕ್ಯಾಲಕ್ಯಲೇಟರ್ ಹಾಗು ರಿಸ್ಟ್‍ವಾಚಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಎನ್.ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ 8160 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಏಳು ತಾಲೂಕುಗಳಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಫೆ.24 ರಂದು ಮಧ್ಯಾಹ್ನ 2-30 ರಿಂದ ಸಂಜೆ 4-30ರವರೆಗೆ ಪರೀಕ್ಷೆ ನಡೆಯಲಿದ್ದು, ಹಾನಗಲ್ ತಾಲೂಕಿನಲ್ಲಿ ಆರು(1728 ವಿದ್ಯಾರ್ಥಿಗಳು), ಹಾವೇರಿ ತಾಲೂಕಿನಲ್ಲಿ ಮೂರು (1248 ವಿದ್ಯಾರ್ಥಿಗಳು), ಹಿರೇಕೆರೂರು (1200ವಿದ್ಯಾರ್ಥಿಗಳು), ಬ್ಯಾಡಗಿ(816), ಸವಣೂರು (792 ವಿದ್ಯಾರ್ಥಿಗಳು), ಶಿಗ್ಗಾಂವ(960 ವಿದ್ಯಾರ್ಥಿಗಳು) ಹಾಗೂ ರಾಣೇಬೆನ್ನೂರು (1416 ವಿದ್ಯಾರ್ಥಿಗಳು) ತಾಲೂಕಿನಲ್ಲಿ ತಲಾ ಎರಡು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ 19 ಜನ ವೀಕ್ಷಕರು, ಮೇಲ್ವಿಚಾರಕರನ್ನು ನೇಮಕಮಾಡಲಾಗಿದೆ. ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಮೂಲಕ ನಿಯೋಜಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ವಿವರ: ಹಾವೇರಿ ನಗರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು, ಎಸ್.ಜೆ.ಎಂ.ಪದವಿ ಪೂರ್ವ ಕಾಲೇಜು, ರಾಚೋಟೇಶ್ವರ ಪದವಿ ಪೂರ್ವ ಕಾಲೇಜು, ಹಿರೇಕೆರೂರು ಪಟ್ಟಣದ ಕೆ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜು, ಡಿ.ಆರ್.ಟಿ.ಬಾಲಕರ ಪ್ರೌಢಶಾಲೆ, ಬ್ಯಾಡಗಿ ಶಹರದ ಸರ್ಕಾರಿ ಎಸ್.ಜೆ.ಜೆ.ಎಂ.ಪದವಿ ಪೂರ್ವ ಕಾಲೇಜು, ನೂತನ ಪ್ರೌಢಶಾಲೆ , ಸವಣೂರ ಪಟ್ಟಣದ ಮಜೀದ್ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾಭಾರತಿ ಪದವಿ ಪೂರ್ವ ಕಾಲೇಜು, ಶಿಗ್ಗಾಂವ ನಗರದ ಎಸ್.ಬಿ.ಬಿ.ಎಂ.ಪದವಿ ಪೂರ್ವ ಕಾಲೇಜು, ಎಸ್.ಆರ್.ಜೆ.ವಿ ಪದವಿ ಪೂರ್ವ ಕಾಲೇಜು, ರಾಣೇಬೆನ್ನೂರು ನಗರದ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಹಾನಗಲ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಎನ್.ಸಿ.ಪದವಿ ಪೂರ್ವ ಕಾಲೇಜು, ಅಂಜುಮನ್ ಪದವಿ ಪೂರ್ವ ಕಾಲೇಜು, ಕೆ.ಎಲ್.ಇ. ಪದವಿ ಪೂರ್ವ ಕಾಲೇಜು, ಶ್ರೀ ಎನ್.ಸಿ.ಪ್ರೌಢಶಾಲೆ ಹಾಗೂ ರೋಷನಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎ.ಎಚ್.ಜಮಖಾನೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ವಿವಿಧ ತಾಲೂಕುಗಳ ತಹಶೀಲ್ದಾರರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇತರರು ಉಪಸ್ಥಿತರಿದ್ದರು.

Share this News
error: Content is protected !!