April 22, 2021

ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಿ, ಇಲ್ಲಾಂದ್ರೆ ಕ್ರಿಮಿನಲ್ ಕೇಸ್.!?

ಹಾವೇರಿ:- ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಅರ್ಹತೆ ಇಲ್ಲದ ಸರ್ಕಾರಿ, ಅರೇ ಸರ್ಕಾರಿ ಹಾಗೂ ನಿಗಮ ಮಂಡಳಿ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಲು ಸೂಚಿಸಲಾಗಿದೆ. ಒಂದೊಮ್ಮೆ ಕಾರ್ಡ್ ಹಿಂದಿರುಗಿಸದೇ ಅದನ್ನು ಬಳಸಿದ್ದೇ ಆದರೆ ಅಂತಹ ಅಧಿಕಾರಿ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರು ಎಚ್ಚರಿಕೆ ನೀಡಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಒಬ್ಬ ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಒಬ್ಬ ಸರ್ಕಾರಿ ಅಧಿಕಾರಿ/ನೌಕರ ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆಯುತ್ತಿರುವುದರಿಂದ ಯಾವ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ. ಆದ್ದರಿಂದ ಇಂತಹ ಅಧಿಕಾರಿ/ನೌಕರರು ಮತ್ತು ನೌಕರರ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಮಾನ್ಯ ಆಹಾರ ಸಚಿವರ ಗಮನಕ್ಕೆ ಬಂದಿದ್ದು, ಅವುಗಳನ್ನು ಕೂಡಲೇ ಹಿಂದಿರುಗಿಸುವಂತೆ ಸೂಚನೆ ನೀಡಲು ನಿರ್ದೇಶನವನ್ನು ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಿ.ಪಿ.ಎಲ್. ಕಾರ್ಡ್‍ನ್ನು ಹೊಂದಿರುವ ನೌಕರರು ತಕ್ಷಣವೇ ಆಯಾ ತಾಲೂಕಾ ತಹಶೀಲ್ದಾರ ಕಚೇರಿಗಳಿಗೆ ಹಿಂದಿರುಗಿಸಲು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.

ಈ ಎಚ್ಚರಿಕೆ ನೀಡಿದ್ದಾಗ್ಯೂ ಜಿಲ್ಲೆಯ ಸರ್ಕಾರಿ/ಸರ್ಕಾರದ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವ ವಿದ್ಯಾಲಯ/ಸಂಸ್ಥೆಯ ಅಧಿಕಾರಿ/ನೌಕರರು ಮತ್ತು ನೌಕರರ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಅವುಗಳನ್ನು ಸ್ವಯಂ ಪ್ರೇರಣೆಯಿಂದ 10 ಮಾರ್ಚ 2021 ರೊಳಗಾಗಿ ಜಿಲ್ಲೆಯ ಆಯಾ ತಹಸೀಲ್ದಾರ್ ಕಛೇರಿಯ ಆಹಾರ ಶಾಖೆಗೆ ಅಧ್ಯರ್ಪಿಸಿದರೆ ಯಾವುದೇ ರೀತಿ ಕ್ರಮವಹಿಸಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಒಂದೊಮ್ಮೆ ಕಾರ್ಡ್‍ಗಳನ್ನು ಹಿಂತಿರುಗಿಸದೇ ಉಳಿಸಿಕೊಂಡಲ್ಲಿ ತಂತ್ರಾಂಶದಿಂದ ಮಾಹಿತಿ ಪಡೆದು, ಶೋಧ ನಡೆಸಿ ಪತ್ತೆ ಹಚ್ಚಿದ್ದಲ್ಲಿ, ಅಂತಹ ಅಧಿಕಾರಿ/ನೌಕರರ ಕಾನೂನಿನ್ವಯ ಕ್ರಮವಹಿಸಿ, ಸಂಬಂಧಿಸಿದ ಅಧಿಕಾರಿ/ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತಿನ ಕ್ರಮವನ್ನು ಕೈಕೊಳ್ಳಲಾಗುವುದೆಂದು ಮತ್ತು ಪಡಿತರ ಚೀಟಿ ಪಡೆದ ದಿನಾಂಕದಿಂದ ಇಲ್ಲಿಯವರೆಗೆ ದಂಡವನ್ನು ವಸೂಲಿ ಮಾಡಲಾಗುವುದೆಂದು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!