April 22, 2021

ಹಸಿವಿನಿಂದ ಬಳಲುತ್ತಿದ್ದ ಮಾರುತಿಗೆ ಅನ್ನದಾತರ ಆರೈಕೆ

ಹಾವೇರಿ- ಮಂಗಗಳು ಹತ್ತಿರ ಬಂದರೆ ಸಾಕು ಕಲ್ಲನ್ನು ಕೈಗೆತ್ತಿಕೊಂಡು ಬೆದರಿಸುವವರೇ ಈಗಿನ ಕಾಲದಲ್ಲಿ ಜಾಸ್ತಿ. ಅಂತಹದರಲ್ಲಿ, ಹೊಲದಲ್ಲಿ ತಾವು ಊಟಕ್ಕೆಂದು ಕುಳಿತಾಗ ಆಹಾರವನ್ನು ಹುಡುಕುತ್ತಾ ಬಂದ ಮಾರುತಿಗೆ ಉಪಚರಿಸುವ ಮೂಲಕ ರೈತರು ಮಾನವೀಯತೆ ಮೆರೆದಿದ್ದಾರೆ.

ಹೀರೆಕೆರೂರು ತಾಲೂಕಿನ ನಡೆನೇಗಿಲು ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಮಧ್ಯಾಹ್ನದ ವೇಳೆ ಊಟಕ್ಕೆಂದು ಕುಳಿತಿದ್ದರು. ಆಗ ಅಲ್ಲಿಗೆ ಆಗಮಿಸಿದ ಮಂಗವೊಂದು ರೊಟ್ಟಿ(ಬುತ್ತಿ) ಗಂಟುಗಳನ್ನು ನೋಡಲು ಆರಂಭಿಸಿತು. ಕೋತಿಯು ಹಸಿವಿನಿಂದ ಬಳಲುತ್ತಿರುವುದನ್ನು ಗಮನಿಸಿದ ರೈತರು ತಮಗಾಗಿ ತಂದಿದ್ದ ಅನ್ನ, ರೊಟ್ಟಿ, ಗಂಜಿ, ಮಜ್ಜಿಗೆ ಮುಂತಾದವುಗಳನ್ನು ಅದಕ್ಕೂ ನೀಡಿದರು. ಎಲ್ಲಿಂದಲೋ ಬಂದ ಅಪರಿಚಿತ ಮಾರುತಿಯನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಪ್ರೀತಿಯಿಂದ ಉಪಚರಿಸಿದರು.

ರೈತರು ಕೊಟ್ಟಿದ್ದನ್ನು ತಿಂದ ಮಂಗವು ಯಾರಿಗೂ ತೊಂದರೆ ಕೊಡದೇ ಸಂತೃಪ್ತಿಯಿಂದ ಅಲ್ಲಿಂದ ಹೊರಟಿತು. ಮಾರುತಿಯ ಮುಗ್ಧ ನಡವಳಿಕೆಯು ರೈತರಿಗೆ ಸಂತೋಷ ತಂದಿತು. ಅದರ ವಿಡಿಯೋವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಖುಷಿಪಟ್ಟರು.

ಘಟನೆಯ ಸಂಪೂರ್ಣ ವಿಡಿಯೋ ಸುದ್ದಿತರಂಗಕ್ಕೆ ದೊರೆತಿದ್ದು, ಸಾಮಾಜಿಕ ತಾಣಗಳಲ್ಲೂ ಇದು ವೈರಲ್‌ ಆಗಿದೆ. ವಿಡಿಯೋ ನೋಡಿದ ಜನರು ನಿರುಪದ್ರವಿ ಮಾರುತಿಯ ಸಂಕಟಕ್ಕೆ ಮರುಗಿದ್ದಾರೆ. ಅನ್ನದಾತರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!