July 25, 2021

ಮೂವರು ಪ್ರಭಾವಿ ಸಚಿವರಿರುವ ಹಾವೇರಿಗೆ ಬಜೆಟ್ ನಲ್ಲಿ ಸಿಕ್ಕಿದ್ದೇನು? ನಿರೀಕ್ಷಿಸಿದ್ದೆಷ್ಟು.? ದಕ್ಕಿದ್ದೆಷ್ಟು.?

ಹಾವೇರಿ/ಬೆಂಗಳೂರು- ರಾಜ್ಯ ಸಚಿವ ಸಂಪುಟದಲ್ಲಿ ಮೂವರು ಪ್ರಭಾವಿ ಸಚಿವರು ಹಾವೇರಿ ಜಿಲ್ಲೆಯವರು. ಆದ್ದರಿಂದ ಸಹಜವಾಗಿಯೇ ಸಿಎಂ ಬಿ.ಎಸ್‌.ಯಡಿಯೂರಪ್ಪನವರ 2021-22ರ ಬಜೆಟ್‌ ಮೇಲೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಎಂಬ ಕನಸನ್ನು ಜನರು ಹೊಂದಿದ್ದರು. ಹಾವೇರಿ ಜಿಲ್ಲೆಯ ನಿರೀಕ್ಷೆಗಳನ್ನು ಈ ಬಾರಿಯ ಬಜೆಟ್‌ ನಿಜಕ್ಕೂ ಈಡೇರಿಸಿದೆಯೇ? ಅಥವಾ ಜನರ ಆಸೆಗೆ ತಣ್ಣೀರೆರಚಿದೆಯೇ? ಇಲ್ಲಿದೆ ಒಂದು ಸಮಗ್ರ ವಿಶ್ಲೇಷಣೆ.

ಜಿಲ್ಲೆಗೆ ಸಿಕ್ಕಿದ್ದೇನು..?
– ಶಿಗ್ಗಾಂವ್‌ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆಯ (ಕೆಎಸ್‌ಆರ್‌ಪಿ) 10ನೇ ಬೆಟಾಲಿಯನ್‌ ಬಲಪಡಿಸಲು 8 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
– ಹಾವೇರಿ ಜಿಲ್ಲೆಯಲ್ಲಿ ನೂತನ ಜಿಲ್ಲಾ ಪೊಲೀಸ್‌ ಸಂಕೀರ್ಣ ನಿರ್ಮಾಣಕ್ಕೆ 8 ಕೋಟಿ ರೂ. ಮೀಸಲಿಟ್ಟಿದ್ದಾರೆ.
– ಬ್ಯಾಡಗಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) 4 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಗುಣ ವಿಶ್ಲೇಷಣಾ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
– ಬೇಡ್ತಿ ಮತ್ತು ವರದಾ ನದಿ ಜೋಡಣೆಯಿಂದ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಎನ್‌.ಡಬ್ಲ್ಯೂ.ಡಿ.ಎ. ಗೆ ಮನವಿ ಮಾಡುವುದಾಗಿ ಬಜೆಟ್‌ನಲ್ಲಿ ಸಿಎಂ ಭರವಸೆ ನೀಡಿದ್ದಾರೆ.

ಹುಸಿಯಾದ ನಿರೀಕ್ಷೆಗಳೇನು..?
– ಧಾರವಾಡ ಹಾಲು ಒಕ್ಕೂಟಕ್ಕೆ ಹೋಗುತ್ತಿರುವ ಹಾಲಿನಲ್ಲಿ ಅರ್ಧದಷ್ಟು ಹಾಲು ಹಾವೇರಿ ಜಿಲ್ಲೆಯದ್ದಾಗಿದ್ದು, ಇಲ್ಲಿನ ಹಾಲು ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕೆಂಬ ಹೈನುಗಾರರ ಹಲವು ವರ್ಷಗಳ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ.
– ಮೆಕ್ಕೆಜೋಳ ಉತ್ಪನ್ನಗಳನ್ನು ಆಧರಿಸಿದ ಮೈಜ್‌ ಪಾರ್ಕ್‌ ಸ್ಥಾಪನೆಗೆ ಅನುದಾನ ಘೋಷಣೆಯಾಗಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.
– ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ 20 ಕೋಟಿ ರೂ. ವೆಚ್ಚದ ಆಯುಷ್ ಸಂಯುಕ್ತ ಆಸ್ಪತ್ರೆಯ ನಿರ್ಮಾಣಕ್ಕೆ ಈ ಹಿಂದೆ ಐದು ಕೋಟಿ ರೂ. ಬಿಡುಗಡೆಯಾಗಿದ್ದರೂ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಇದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದಿರುವುದು ನಿರಾಶೆ ಮೂಡಿಸಿದೆ.
– ಶಿಗ್ಗಾಂವ್‌ನಲ್ಲಿ ಜವಳಿ ಪಾರ್ಕ್ ಆರಂಭಿಸಲು ಹಣ ಬಿಡುಗಡೆ ಮಾಡುವ ಬಗ್ಗೆಯೂ ಬಜೆಟ್‌ನಲ್ಲಿ ಭರವಸೆ ಸಿಕ್ಕಿಲ್ಲ.
– ನಿರ್ಮಾಣ ಹಂತದಲ್ಲಿರುವ ಐದು ಕೋಟಿ ವೆಚ್ಚದಲ್ಲಿ ಶಿಶುನಾಳ ಶರೀಫರ ಗ್ರಾಮ ಅಭಿವೃದ್ಧಿಗೆ ಸಿಎಂ ಹೆಚ್ಚಿನ ಅನುದಾನ ನೀಡುತ್ತಾರೆಂಬ ನಂಬಿಕೆ ಭಗ್ನಗೊಂಡಿದೆ.
– ಮೆಡಿಕಲ್‌ ಕಾಲೇಜು ಕಟ್ಟಡದ ಕಾಮಗಾರಿಗೆ ಇನ್ನಷ್ಟು ಹಣ ಬಿಡುಗಡೆ ಮಾಡಲು ಸಿಎಂ ಹಿಂದೇಟು ಹಾಕಿದ್ದಾರೆ.
– ರಟ್ಟೀಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ಅನುದಾನ ಘೋಷಿಸುವ ಬಗ್ಗೆಯೂ ಮುಖ್ಯಮಂತ್ರಿಗಳು ನಿರಾಸಕ್ತಿ ತೋರಿದ್ದಾರೆ.

Share this News
error: Content is protected !!