July 25, 2021

ರಾತ್ರೋರಾತ್ರಿ 9 ತಿಂಗಳ ಮಗು ನಾಪತ್ತೆ: ಹುಡುಕಿದಾಗ ಕಂಡಿದ್ದು ನರಿ..!

ಹಾವೇರಿ: ಪೋಷಕರ ಜೊತೆ ಮಲಗಿದ್ದ ಒಂಬತ್ತು ತಿಂಗಳ ಮಗುವನ್ನು ತಡರಾತ್ರಿ ಬಂದ ನರಿಯು ಬರೋಬ್ಬರಿ 100 ಮೀಟರ್‌ವರೆಗೆ ಎಳೆದೊಯ್ತು ಗಾಯಗೊಳಿಸಿದ ಹೃದಯವಿದ್ರಾವಕ ಘಟನೆಗೆ ಹಾವೇರಿ ತಾಲೂಕು ಸಾಕ್ಷಿಯಾಗಿದೆ.

ಕೂಲಿ ಕಾರ್ಮಿಕ ಹುಸೇನ್‌ ದಂಪತಿಯು ಹೊಸರಿತ್ತಿ ಗ್ರಾಮದ ಹೊರವಲಯದ ಬಯಲಿನಲ್ಲಿ ಭಾನುವಾರ ರಾತ್ರಿ ತಮ್ಮ ಪುಟ್ಟ ಮಗುವಿನೊಂದಿಗೆ ಮಲಗಿದ್ದರು. ತಮ್ಮ ಬಳಿ ಹೆಚ್ಚೇನೂ ಸಾಮಾನಿಲ್ಲದ ಕಾರಣ ಜೋಪಡಿಯನ್ನೂ ನಿರ್ಮಿಸಿಕೊಳ್ಳದೇ ಬಯಲಿನಲ್ಲೇ ನಿದ್ದೆಗೆ ಜಾರಿದ್ದರು. ಇದೇ ಸಮಯದಲ್ಲಿ ಯಾರಿಗೂ ತಿಳಿಯದಂತೆ ಬಂದ ನರಿಯೊಂದು ಮಗುವನ್ನು ಹೊತ್ತೊಯ್ತಿದೆ.

ಮಗುವಿನ ಚೀರಾಟ ಕೇಳಿ ಪೋಷಕರು ಎಚ್ಚರಗೊಂಡರು. ಆತಂಕದಿಂದ ಕೂಗುತ್ತಾ ಮಗುವನ್ನು ಹುಡುಕಲು ಆರಂಭಿಸಿದರು. ಪೋಷಕರ ಆಕ್ರಂದನ ಕೇಳಿ ಸ್ಥಳೀಯ ಜನರು ಕೂಡ ಆಗಮಿಸಿ, ಮಗುವನ್ನು ಹುಡುಕಲು ಸಾತ್‌ ನೀಡಿದರು. ಇವೆಲ್ಲವನ್ನು ಅರಿತು ಹೆದರಿದ ನರಿಯು ಸುಮಾರು 100 ಮೀಟರ್‌ ದೂರದಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದೆ.

ಮುಖ, ಗಂಟಲು ಸೇರಿದಂತೆ ಹಲವು ಕಡೆ ಗಾಯಗೊಂಡಿದ್ದ ಮಗುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this News
error: Content is protected !!