April 22, 2021

ಮುಖ್ಯಮಂತ್ರಿಗಳೇ ಇತ್ತ ಗಮನ ಹರಿಸಿ..! ICU ನಲ್ಲಿದೆ ಜಾನಪದ ವಿಶ್ವವಿದ್ಯಾಲಯ..?

ಹಾವೇರಿ- ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗಾಗಿ ಹತ್ತು ವರ್ಷಗಳ ಹಿಂದೆ ಆರಂಭವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಉಪನ್ಯಾಸಕರು ಮತ್ತು ಇತರೆ ನೌಕರರು ಸಂಬಳವಿಲ್ಲದೇ ನಾಲ್ಕು ತಿಂಗಳಿನಿಂದ ಪರದಾಡುವಂತಾಗಿದೆ.

ಪ್ರತಿವರ್ಷ ರಾಜ್ಯ ಸರ್ಕಾರವು ಜಾನಪದ ವಿಶ್ವವಿದ್ಯಾಲಯಕ್ಕೆ 4.5ರಿಂದ 5 ಕೋಟಿ ರೂ.ತನಕ ಅನುದಾನ ನೀಡುತ್ತಿತ್ತು. 2019-20ರಲ್ಲೂ ವಿಶ್ವವಿದ್ಯಾಲಯವು 5 ಕೋಟಿ ರೂಪಾಯಿಗೆ ಮನವಿ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ನೀಡಿದ್ದು ಮಾತ್ರ ಕೇವಲ 50 ಲಕ್ಷ ರೂಪಾಯಿ! ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಬಹುತೇಕ ಚಟುವಟಿಕೆಗಳು ಮೊಟಕುಗೊಂಡಿದ್ದು, ಸದ್ಯದಲ್ಲೇ ವಿವಿಯ ಬಾಗಿಲು ಮುಚ್ಚಿದರೂ ಆಶ್ಚರ್ಯಪಡಬೇಕಿಲ್ಲ.

ಅನುದಾನದ ಕೊರತೆಯಿಂದಾಗಿ 30 ಉಪನ್ಯಾಸಕರಿಗೆ ಹಾಗೂ 20 ಬೋಧಕೇತರ ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ವಿದ್ಯುತ್ ಬಿಲ್‌ ಹಾಗೂ ಟೆಲಿಫೋನ್‌ ಬಿಲ್‌ ಕಟ್ಟಲೂ ವಿಶ್ವವಿದ್ಯಾಲಯದ ಬಳಿ ಹಣವಿಲ್ಲ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಸಂಶೋಧನೆಗಳು, ಸಂವಾದಗಳು, ಕಾರ್ಯಾಗಾರಗಳು ಕೂಡ ಕಡಿಮೆಯಾಗಿದ್ದು, ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗಿದೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಉಪನ್ಯಾಸಕರೊಬ್ಬರು, “ಸಂಬಳವೇ ನಮ್ಮ ಜೀವನಕ್ಕೆ ಆಧಾರ. ಈಗ ವಿವಿಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವುದು ನಮ್ಮನ್ನು ಹೈರಾಣಾಗಿಸಿದೆ. ನಾಲ್ಕು ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಡಿ.ಬಿ.ನಾಯಕ್‌ರವರು “ಹಣದ ಕೊರತೆಯಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಮ್ಮ ಬೇಡಿಕೆಯನ್ನು ಅವರು ಈಡೇರಿಸುತ್ತಾರೆಂಬ ನಂಬಿಕೆಯಿದೆ. ಅನುದಾನಕ್ಕಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳು ತಕ್ಷಣವೇ ಇತ್ತ ಗಮನಹರಿಸಿ ʻವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಉಳಿಸಿ, ಬೆಳೆಸಬೇಕಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!