July 25, 2021

ಬಟ್ಟೆ ಅಂಗಡಿ ‌ಮಾಲೀಕನಿಗೆ ಬಿತ್ತು, ಬರೊಬ್ಬರಿ 13ಸಾವಿರ ರೂ ದಂಡ..! ಯಾಕೆ ಗೊತ್ತಾ..?

ಹಾವೇರಿ – ಶೋ ರೂಮ್‍ನಲ್ಲಿ ಬಟ್ಟೆ ಖರೀದಿ ಸಂದರ್ಭದಲ್ಲಿ ಗ್ರಾಹಕರಿಗೆ ಕಾನೂನು ಬಾಹೀರವಾಗಿ ಬಟ್ಟೆ ಪ್ಯಾಕ್ ಮಾಡಿದ ಪೇಪರ್ ಕ್ಯಾರಿ ಬ್ಯಾಗಿಗೆ ಪ್ರತ್ಯೇಕ ಬಿಲ್ ನಮೂದಿಸಿದ ಶೋ ರೂಮ್ ಮಾಲೀಕನಿಗೆ ಪರಿಹಾರ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ದಾವಣಗೆರೆ ನಗರದ ಶ್ರೀಮತಿ ಜ್ಯೋತಿ ಕೋಂ.ರಾದೇಶ ಜಂಬಗಿ ಅವರು ಡಿಸೆಂಬರ್-2019 ಮಾಹೆಯಲ್ಲಿ ದಾವಣಗೆರೆಯ ಲೈಫ್ ಸ್ಟೈಲ್ ಇಂಟರ್‍ನ್ಯಾಶನಲ್ ಪ್ರೈ.ಲಿ.ನಲ್ಲಿ ಬಟ್ಟೆ ಖರೀದಿಸಿದ ಸಂದರ್ಭದಲ್ಲಿ ಅಂಗಡಿಯವರು ಬಟ್ಟೆ ಬಿಲ್ಲಿನ ಜೊತೆಗೆ ಕಾಗದದ ಕೈಚೀಲಕ್ಕೆ 7 ರೂ. ಹೆಚ್ಚುವರಿ ಮೊತ್ತವನ್ನು ನಮೂದಿಸಿ ಬಿಲ್ಲು ನೀಡಿದ್ದು, ಹೆಚ್ಚುವರಿ 7 ರೂ. ಮೊತ್ತವನ್ನು ಅಂಗಡಿ ಮಾಲೀಕರು ಭರಿಸುವಂತೆ ಅವರು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್.ಅವರು ಸರಕುಗಳ ಮಾರಾಟ ಕಾಯ್ದೆ-1930 ಕಲಂ 35(5) ಪ್ರಕಾರ ಯಾವುದೇ ಮಾಲ್ ಅಥವಾ ಶೋ ರೂಮ್‍ಗಳಿಗೆ ಗ್ರಾಹಕರು ಹೋದಾಗ ಅವರು ಕೊಂಡುಕೊಂಡಂತಹ ವಸ್ತುಗಳನ್ನು ಗ್ರಾಹಕರು ತಮ್ಮ ಮನೆಗೆ ಅಥವಾ ವಾಹನದವರೆಗೆ ತಲುಪುವಂತೆ ಉಚಿತವಾಗಿ ಯಾವುದೇ ಪರಿಕರದಲ್ಲಿ ಹಾಕಿ ಕೊಡುವುದು ಮಾರಾಟಗಾರನ ಜವಾಬ್ದಾರಿಯಾಗಿದೆ.

ಶೋ ರೂಮ್ ಮಾಲಿಕನು ಪೇಪರ್ ಕ್ಯಾರಿ ಬ್ಯಾಗ್ ಸಲುವಾಗಿ ವಿಧಿಸಿದ ಖರ್ಚು ಕಾನೂನು ಬಾಹೀರವಾಗಿದೆ. ಕಾರಣ ಶ್ರೀಮತಿ ಜ್ಯೋತಿ ಕೋಂ.ರಾದೇಶ ಜಂಬಗಿ ಅವರಿಗೆ ಪೇಪರ ಕ್ಯಾರಿ ಬ್ಯಾಗಿಗೆ ಭರಿಸಿದ ವೆಚ್ಚ ಏಳು ರೂ., ಪಿರ್ಯಾದುದಾರರ ಮಾನಸಿಕ ವ್ಯಥೆಗೆ ಒಂದು ಸಾವಿರ ಹಾಗೂ ದಾವೆ ಖರ್ಚು ಎರಡು ಸಾವಿರ ರೂ.ಗಳನ್ನು ಒಂದು ತಿಂಗಳೊಳಗೆ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ಅನುಚಿತ ವ್ಯಾಪಾರ ಪದ್ಧತಿಗರ ಪ್ರಾಯಶ್ಚಿತ್ತದ ಪರಿಹಾರವಾಗಿ 10ಸಾವಿರ ರೂ.ಗಳನ್ನು ಮಾನ್ಯ ಅಧ್ಯಕ್ಷರು, ಜಿಲ್ಲಾ ಗ್ರಾಹಕ ಆಯೋಗ, ಹಾವೇರಿ ಅವರ “ಗ್ರಾಹಕ ಕಾನೂನು ನೆರವು ಖಾತೆ” ಗೆ ಜಮೆ ಮಾಡಲು ಆದೇಶಿಸಲಾಗಿದೆ.

ನಿಗಧಿತ ಅವಧಿಯಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.

Share this News
error: Content is protected !!