July 25, 2021

ರಸ್ತೆಯಲ್ಲಿ ಅನಾಥವಾಗಿ ವಾಸವಾಗಿದ್ದ ಅಜ್ಜಿಗೆ ಆಸರೆಯಾದ ಕಾಗಿನೆಲೆ ಪಿ.ಎಸ್.ಐ..!

ಹಾವೇರಿ : ಪೋಲಿಸರೆಂದರೆ ನಮಗೆ ಇರುವ ಕಲ್ಪನೆಯೆ ಬೇರೆ.‌ ಸಿನಿಮಾಗಳಲ್ಲಿಯೂ ಪೋಲಿಸರನ್ನು ವಿಲನ್ ಗಳಂತೆ ಬಿಂಬಿಸಲಾಗಿರುತ್ತೆ. ಆದರೆ ಅವರಲ್ಲಿಯೂ ಸಹ ಹೃದಯವಂತರು, ಕರುಣಾಮಯಿಗಳು ಇರುತ್ತಾರೆ ಎನ್ನುವುದಕ್ಕೆ ಘಟನೆ ಸಾಕ್ಷಿಯಾಗಿದೆ.

ಬೀದಿಯಲ್ಲಿ ವಾಸಮಾಡುತ್ತಿದ್ದ ವೃದ್ದೆಗೆ ಚಿಕಿತ್ಸೆ ಕೊಡಿಸಿ ವೃದ್ದಾಶ್ರಮಕ್ಕೆ ಸೇರಿಸಿ ಕಾಗಿನೆಲೆ ಪಿಎಸ್ಐ ಮಾನವೀಯತೆ ಮೆರೆದಿದ್ದಾರೆ. ಕಾಗಿನೆಲೆ ಗ್ರಾಮದಲ್ಲಿ 65 ವರ್ಷದ ವೃದ್ಧೆಯೊಬ್ಬಳು ಅನಾಥವಾಗಿ ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ಸಾರ್ವಜನಿಕರು ಪಿಎಸ್ಐಗೆ ಮಾಹಿತಿ ನೀಡುತ್ತಾರೆ. ಅದರಂತೆ ತಕ್ಷಣವೇ ಸ್ಥಳಕ್ಕೆ ದಾವಿಸಿದ ಪಿಎಸ್ಐ ಡಿ.ಕೆ.ಬಳಿಗಾರ ವೃದ್ಧೆಗೆ ಆಸರೆಯಾದರು.

 

65 ವರ್ಷದ ವೃದ್ಧೆ ಗೌರಮ್ಮ ಸಣ್ಮನಿ ವಯೋವೃದ್ಧೆ ಯನ್ನು ವಿಚಾರಿಸಿದ ಪಿಎಸ್ಐ ಕೂಡಲೆ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ವೃದ್ಧೆಯನ್ನು ಶಿಗ್ಗಾಂವಿ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದರು‌. ಗೌರಮ್ಮಳ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಮರಣದ ನಂತರ ಗೌರಮ್ಮ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ಅನಾಥೆಯಂತೆ ಜೀವನ ಸಾಗಿಸುತ್ತಿದ್ದಳು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಜ್ಜಿ ಇರುವ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಬಳಿಗಾರ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಮೂಲತಃ ತಿಮ್ಮಾಪುರ ಗ್ರಾಮದವಳಾದ ವೃದ್ದೆ ಗೌರಮ್ಮಳ ಪತಿ ಕಳೆದ‌ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಗೌರಮ್ಮಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ‌ ಒಟ್ಟು ಮೂವರು ಮಕ್ಕಳಿದ್ದಾರೆ. ಆದರೆ ಯಾವುದೋ‌ ಕಾರಣಕ್ಕೆ ಗೌರಮ್ಮಳೆ ಮನೆಬಿಟ್ಟು ಬಂದು ಅಲ್ಲಿ ಇಲ್ಲಿ ವಾಸ ಮಾಡಿಕೊಂಡಿದ್ದಾಳೋ ಅಥವಾ ಮಕ್ಕಳೆ ವೃದ್ದೆಯನ್ನು ಆರೈಕೆ ಮಾಡಲಾಗದೆ ಮನೆಯಿಂದ ಹೊರಗೆ ಹಾಕಿದ್ದಾರೋ ಗೊತ್ತಿಲ್ಲ. ಗೌರಮ್ಮ ಮಾತ್ರ ಥೇಟ್ ಅನಾಥಳಂತೆ ಕಾಗಿನೆಲೆ ಗ್ರಾಮ ಸೇರಿದಂತೆ ಅಲ್ಲ ಇಲ್ಲಿ ವಾಸವಾಗಿದ್ದಳು.

ಪಿಎಸ್ಐ ಡಿ.ಕೆ.ಬಳಿಗಾರ ವೃದ್ದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪಿಎಸ್ ಐ ಬಳಿಗಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

_____

Share this News
error: Content is protected !!