July 25, 2021

ಭಕ್ತರ ಉದ್ಧಾರದ ಜೊತೆಗೆ ತಮ್ಮ ಆತ್ಮ ಕಲ್ಯಾಣವನ್ನು ಸಾಧಿಸಿದ ವಿರಳ ಪರಂಪರೆಯ ಶ್ರೇಷ್ಠ ಗುರು ಲಿಂ.ಶ್ರೀ ಶಾಂತವೀರ ಮಹಾಸ್ವಾಮಿಗಳು

ಹಾವೇರಿ:- ಭಕ್ತರಿಗೆ ಸಲ್ಲಿಸಿದ ಸೇವೆಯನ್ನು ತಾನು ಮಾಡುವ ಕರ್ತವ್ಯವೆಂದು ಭಾವಿಸಿ, ಭಕ್ತರ ಉದ್ಧಾರದ ಜೊತೆಗೆ ತಮ್ಮ ಆತ್ಮ ಕಲ್ಯಾಣವನ್ನು ಸಾಧಿಸಿದ ವಿರಳ ಪರಂಪರೆಯ ಶ್ರೇಷ್ಠ ಗುರು ಲಿಂ. ಶಾಂತವೀರ ಪಟ್ಟಾಧ್ಯಕ್ಷರ ಬದುಕು ಸದಾ ಸ್ಮರಣೀಯವಾಗಿದ್ದು, ಅಂತಹವರ ಪುಣ್ಯ ಸ್ಮರಣೋತ್ಸವದಿಂದ ನಮ್ಮಲ್ಲಿ ಸಾತ್ವಿಕ ಮನಸ್ಸು ಸೃಷ್ಠಿಯಾಗುತ್ತದೆ ಎಂದು ಗದಗ ಮತ್ತು ಯಡೆಯೂರು ತೋಂಟದಾರ್ಯಮಠದ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ೪೧ ನೇ ಪುಣ್ಯ ಸ್ಮರಣೊತ್ಸವದ ೬ ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದಾ ಕಾಲ ಭಕ್ತರ ಇಚ್ಚೆಯನ್ನು ಈಡೇರಿಸಿ, ಅವರಲ್ಲಿನ ಅಜ್ಞಾನ ಕಳೆದು ಆಧ್ಯಾತ್ಮಿಕ ಬೆಳಕನ್ನು ತೋರಿ ಬದುಕಿಗೆ ಶಾಂತಿ, ವಿಶ್ವಾಸ, ಅಂತಃಕರಣ ಮೂಡಿಸಿದ ಶಾಂತವೀರ ಶ್ರೀಗಳ ಬದುಕು ಒಂದು ಆದರ್ಶ ಮೌಲ್ಯಗಳ ಪ್ರತಿರೂಪವಾಗಿದ್ದು, ಅವರ ಅನುಭಾವದಿಂದ ಕೂಡಿದ ಜನಸೇವೆ ಸಾರ್ಥಕತೆಯ ಮಹೋನ್ನತೆ ಸಾಧನೆಯಾಗಿದೆ ಎಂದು ಹೇಳಿದರು.

ಮಾನವನ ದೇಹ ಭಗವಂತ ಕೃಪೆ. ಅದು ಪ್ರಸಾದ ಕಾಯವಾಗಿದ್ದು, ಅದನ್ನು ಸತ್ಕಾರ್ಯಕ್ಕೆ ಸಮಾಜೋದ್ಧಾರಕ್ಕೆ ಬಳಸಬೇಕು. ಆಮೂಲಕ ಭಗವಂತನ ಸಾಕ್ಷಾತ್ಕಾರಕ್ಕೆ ಬಳಸಿ ಆಧ್ಯಾತ್ಮಿಕ ಕಲ್ಯಾಣವನ್ನು ಸಾಧಿಸಬೇಕು. ಇಂತಹ ಮಹತ್ಕಾರ್ಯ ಮಾಡಿದವರು ಮಹಾತ್ಮರು, ಲಿಂ. ಶಾಂತಲಿಂಗ ಶ್ರೀಗಳು ಭಕ್ತಿ, ಶ್ರದ್ಧೆ ಮತ್ತು ವಿಶ್ವಾಸವುಳ್ಳ ಶಿಷ್ಯಬಳಗ ಸೃಷ್ಠಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿ ಉಂಟಾಗಲು ಶ್ರಮಿಸಿದ ಅವರು ಸಮಾಜಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡಿದ್ದರು ಎಂದು ಹೇಳಿದರು.

ಮಹಾತ್ಮರ ಜೀವನ ದರ್ಶನ ಪ್ರವಚನದಲ್ಲಿ ಮಾತನಾಡಿದ ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಈ ಪ್ರಕೃತಿಯಲ್ಲಿನ ಗಾಳಿ, ನೀರು, ಬೆಳಕು ಎಲ್ಲರಿಗೂ ಹೇಗೆ ಸಮಾನವಾಗಿ ಸಿಗುತ್ತದೆಯೊ ಅದೇ ರೀತಿ ಸ್ವಾಮಿಯಾದವರು ತಮ್ಮ ತಪಸ್ಸಶಕ್ತಿಯನ್ನು ಸಮಾಜದ ಎಲ್ಲರಿಗೂ ಸಮಾನವಾಗಿ ನೀಡಬೇಕು. ಅದು ಆದರ್ಶ ಸ್ವಾಮೀಜಿ ಲಕ್ಷಣ, ಅಂತಹ ಪರಂಪರೆಯನ್ನು ಗದುಗಿನ ಲಿಂ. ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ ನಡೆಸಿದ್ದರು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಭಾಕರರಾವ್ ಮಂಗಳೂರು, ಶಿವಲೀಲಾ ಮರಗಾಲ, ಪುಟ್ಟವ್ವ ಚೂರಿ, ವಿಜಯಕುಮಾರ ಮುದುಕಣ್ಣನವರ, ಎಸ್.ಆರ್. ಗೊಡ್ಡೆಮ್ಮಿ, ವಿಜಯಕುಮಾರ ಹಿರೇಮಠ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ದಾವಣಗೆರೆಯ ಬಸಾಪುರದ ಬಸವ ಕಲಾಲೋಕದ ಶಶಿಧರ ಮತ್ತು ಸಂಗಡಿಗರು ವಚನ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದಲ್ಲಿ ಬೈರನಹಟ್ಟಿಯ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮೀಜಿ, ಹೋತನಹಳ್ಳಿಯ ಶಂಭುಲಿಂಗ ಪಟ್ಟಾಧ್ಯಕ್ಷರು, ಶಂಕರಯ್ಯ ಗುರುಮಠ, ಬಸವರಾಜ ಹೊನ್ನಿಗನೂರು, ಹನುಮಂತಪ್ಪ ಕಾಮನಹಳ್ಳಿ, ಜಿ.ಎಸ್. ಭಟ್, ಶಿವಯೋಗಿ ಹಿರೇಮಠ, ಎಂ.ಎಸ್. ಹಿರೇಮಠ, ಲಿಂಗಯ್ಯ ಚಿಕ್ಕಯ್ಯನಮಠ, ತಿಪ್ಪೇಸ್ವಾಮಿ, ಚನಬಸಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಸಿಂದಗಿಮಠದ ಸಂಚಾಲಕ ಶಿವಬಸಯ್ಯ ಆರಾದ್ಯಮಠ ಸ್ವಾಗತಿಸಿದರು. ವಾಗೀಶಯ್ಯ ಶಾಸ್ತ್ರಜೀ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಜಿ.ಎಸ್. ಭಟ್ ವಂದಿಸಿದರು.

Share this News
error: Content is protected !!