July 25, 2021

ನಾದಬ್ರಹ್ಮ ಲಿಂ.ಪಂ.ಪಂಚಾಕ್ಷರಿ ಗವಾಯಿಗಳ ಪ್ರಾಧಿಕಾರ ರಚನೆಗೆ ಸರ್ಕಾರದ ಭರವಸೆ: ಯಾತ್ರಿ ನಿವಾಸ ಮತ್ತು ಸಂಗೀತ ಪಾಠ ಶಾಲೆ ಆರಂಭಕ್ಕೆ ಸಿಕ್ಕ ಸಮ್ಮತಿ..!

ನಾದಬ್ರಹ್ಮ ಅಂಧ-ಅನಾಥರ ಪಾಲಿನ ಬೆಳಕು ಲಿಂ.ಪಂ. ಪಂಚಾಕ್ಷರಿ ಗವಾಯಿಗಳ ಪ್ರಾಧಿಕಾರವನ್ನು ಜನ್ಮಸ್ಥಳ ಕಾಡಶೆಟ್ಟಿಹಳ್ಳಿಯಲ್ಲಿ ರಚನೆ ಮಾಡುವಂತೆ ಕೋರಿದ್ದ ಮನವಿಗೆ ಸರ್ಕಾರ ಭರವಸೆ ನೀಡಿದೆ.

ಹಾವೇರಿ- ಹಾನಗಲ್ ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಪ್ರಾಧಿಕಾರ ರಚನೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ವಿಧಾನ ಪರಿಷತ್ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಗವಾಯಿಗಳು ಸಂಗೀತ, ಸಾಹಿತ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಹಸ್ರಾರು ಅಂಧ-ಅನಾಥರಿಗೆ ಸನ್ಮಾರ್ಗ ತೋರಿದ್ದಾರೆ. ಇಡೀ ನಾಡು ಹಾನಗಲ್ಲನ್ನು ಗುರುತಿಸುವಂತೆ ಮಾಡಿದ್ದಾರೆ. ಇಂಥ ಗವಾಯಿಗಳ ಗೌರವಾರ್ಥ ಅವರ ಜನ್ಮಸ್ಥಳ ಕಾಡಶೆಟ್ಟಿಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಾಧಿಕಾರ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ್ ಮಾನೆ ಅಧಿವೇಶನದಲ್ಲಿ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿ ಅವರು ಪ್ರತಿಕ್ರಿಯೆ ನೀಡಿ ಪ್ರಾಧಿಕಾರ ರಚನೆ ಹಾಗೂ ಅಗತ್ಯ ಅನುದಾನ ಒದಗಿಸುವ ಕುರಿತು ನಿಯಮಾನುಸಾರ ಆರ್ಥಿಕ ಪರಿಣಾಮಗಳು ಸೇರಿದಂತೆ ಪ್ರಾಧಿಕಾರದ ಅಂಗರಚನೆ ರೂಪರೇಷೆ ತಯಾರಿಸುವ ಬಗೆಗೆ ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿ ಪ್ರಾಧಿಕಾರದ ಭರವಸೆ ನೀಡಿದರು.

 

ಪ್ರಾಧಿಕಾರ ರಚನೆ ಸ್ವಲ್ಪ ವಿಳಂಬವಾಗಲಿರುವ ಹಿನ್ನೆಲೆಯಲ್ಲಿ ಕಾಡಶೆಟ್ಟಿಹಳ್ಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಸಂಗೀತ ಶಾಲೆ ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದರು.

ಮನವಿಗೆ ಸ್ಪಂದಿಸಿದ ಸರ್ಕಾರ ಈ ವರ್ಷವೇ ಯಾತ್ರಿ ನಿವಾಸ ನಿರ್ಮಿಸಿ, ಸಂಗೀತ ಶಾಲೆ ಆರಂಭಿಸುವ ಭರವಸೆವನ್ನು ನೀಡಿದೆ. ಸರ್ಕಾರದ ಭರವಸೆಗೆ ಗ್ರಾಮಸ್ಥರು ಹಾಗೂ ಮುಖಂಡರಾದ ವಿಜಯಕುಮಾರ ದೊಡ್ಡಮನಿ, ಚಂದ್ರಯ್ಯ ಚಿಕ್ಕಮಠ, ಚನ್ನವೀರಯ್ಯ ಪೂಜಾರ,
ಬಸವರಾಜ್ ಕೊತ್ತಂಬರಿ, ಅಶೋಕ ಹಲಸೂರ, ವೀರಸಂಗಪ್ಪ ಮಾವಿನಮರದ, ಶಾಂತವೀರ ಜಂಬಗಿ ಸರ್ಕಾರಕ್ಕೆ ಹಾಗೂ ವಿಧಾನ ಪರಿಷತ್ ಶ್ರೀನಿವಾಸ ಮಾನೆಗೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share this News
error: Content is protected !!