July 25, 2021

ಅಖಾಡದಲ್ಲಿಯೇ ಕೊನೆಯುಸಿರೆಳೆದ ಟಗರು ಕಾಳಗದ ಪೈಲ್ವಾನ್ ಮಂಜು ಪೈ..! ಯಾರಿವರು..?

ಹಾವೇರಿ : ಕಾಟನ್ ಸಿಟಿ ರಾಣೆಬೆನ್ನೂರು ಅಂದರೆ ಕುಸ್ತಿ ಪಟುಗಳ ತವರೂರು. ಕುಸ್ತಿಯಲ್ಲಿ ಹೆಸರು ಮಾಡಿರುವ ಸಾಕಷ್ಟು ಜನರು ಈ ನಗರದಲ್ಲಿದ್ದಾರೆ. ಕುಸ್ತಿಗೆ ಇನ್ನೊಂದು ಹೆಸರೇ ರಾಣೇಬೆನ್ನೂರು.

ಹೀಗೆ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಬೆಳ್ಳಿಯ ಗದೆ ಗೆದ್ದು ಬರುತ್ತಿದ್ದ ಮಂಜು ಪೈ ಎಂಬ ಪೈಲ್ವಾನ್ ಕಳೆದ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ಮಂಜು ಪೈಲ್ವಾನ್ ನ ಅತ್ಯಂತ ಕುಚುಕು ಗೆಳೆಯನಾಗಿದ್ದ ನಗರದ ಕುರುಬಗೇರಿ ನಿವಾಸಿ ದಿಲೀಪ ಎಂಬಾತನಿಗೆ ಗೆಳೆಯನನ್ನು ಮರೆಯಲು ಆಗಲಿಲ್ಲ. ಹೀಗಾಗಿ ತಾನು ಸಾಕಿದ್ದ ಟಗರಿಗೆ ಗೆಳೆಯ ಮಂಜು ಪೈ ನ ಹೆಸರನ್ನು ಇಟ್ಟು ಬೆಳಿಸಿದ. ಗೆಳೆಯ ಕುಸ್ತಿಯಲ್ಲಿ ಹೆಸರು ಮಾಡಿದ್ದರೆ ಟಗರು, ಕಾಳಗದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ಹೋಯಿತು.

ಹೀಗೆ ಮೊೊೊನ್ನೆ್ನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ರಾಜ್ಯಮಟ್ಟದ ಭಾರಿ ಭಾರಿ ಟಗರಿನ ಕಾಳಗ ಆಯೋಜಿಸಲಾಗಿತ್ತು. ಗೆಳೆಯ ಮಂಜು ಪೈ ಹೆಸರಿನ ಟಗರನ್ನು ದಿಲೀಪ ಎಂದಿನಂತೆ ಟಗರು ಕಾಳಗಕ್ಕೆ ತೆಗೆದುಕೊಂಡು ಹೋಗಿದ್ದರು. ಸಂಘಟಕರು ಮಂಜು ಪೈ ಎಂದು ಟಗರನ್ನು ಕೂಗಿ ಕರೆಯುತ್ತಿದ್ದಂತೆ ದಿಲೀಪನ ಟಗರು ಕಾಳಗದ ಅಖಾಡ ಪ್ರವೇಶಿಸಿತ್ತು. ಅಖಾಡಕ್ಕೆ ಬಂದು ಕಾಳಗಕ್ಕೆ ನಿಲ್ಲುತ್ತಿದ್ದಂತೆ ಮಂಜು ಪೈ ಹೆಸರಿನ ಟಗರು ನೆಲಕ್ಕೆ ಬಿದ್ದು ಬಿಟ್ಟಿತು.‌ ಒಂದು ಕ್ಷಣ ಸುತ್ತಲೂ ಮೌನ ಆವರಿಸಿತು. ಏನಾಯ್ತು ಎಂದು ನೋಡುವಷ್ಟರಲ್ಲಿ ಮಂಜು ಪೈ ಟಗರು ತನ್ನ ಅಸಂಖ್ಯ ಅಭಿಮಾನಿಗಳನ್ನು ಬಿಟ್ಟು ಇಹಲೋಕಕ್ಕೆ ಪಯಣಿಸಿತ್ತು.

ದಿಲೀಪನ ಗೆಳೆಯ ಮಂಜು ಪೈ ರಾಜ್ಯದಲ್ಲಿ ನಡೆದ ಬಹುತೇಕ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ. ಇನ್ನೂ ದೊಡ್ಡ ದೊಡ್ಡ ಸಾಧನೆ ಮಾಡಬೇಕು ಎನ್ನುತ್ತಿರುವಾಗಲೆ ಮಂಜು ಪೈ ಮೃತಪಟ್ಟಿದ್ದನಂತೆ. ಗೆಳೆಯ ಸಾಂಪ್ರದಾಯಿಕ ಕ್ರೀಡೆ ಕುಸ್ತಿಯಲ್ಲಿ ಫೇಮಸ್ ಆಗಿದ್ದ. ಆತನ ಮರಣದ ನಂತರ ದಿಲೀಪ ತನ್ನ ಗೆಳೆಯ ಮಂಜು ಪೈ ಹೆಸರಿನ ಟಗರು ಕೂಡ ರಾಜ್ಯದ ಅನೇಕ ಕಡೆಗಳಲ್ಲಿ ನಡೆದ ಟಗರಿನ ಕಾಳಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿತ್ತು. ಗೆಳೆಯನಂತೆಯೇ ಹೆಸರು ಮಾಡುತ್ತಿದ್ದ ಈ ಟಗರನ್ನು ನೋಡುತ್ತಾ, ಅದರ ಆಡುತ್ತಾ ಗೆಳೆಯನ ನೆನಪನ್ನು ಮರೆಯುತ್ತಿದ್ದರು.

ಟಗರಿನ ಕಾಳಗದ ಅಖಾಡದಲ್ಲಿ ಕೊನೆಯುಸಿರೆಳೆದ ಮಂಜು ಪೈ ಟಗರುರನ್ನು ದಿಲೀಪ ಮತ್ತು ಆತನ ಗೆಳೆಯರು ರಾಣೆಬೆನ್ನೂರಿಗೆ ತೆಗೆದುಕೊಂಡು ಹೋದರು. ಮನೆಯಲ್ಲಿ ಪೂಜೆ ಮಾಡಿ ಟಗರನ್ನು ವಾಹನದ ಮೇಲೆ ಇಟ್ಟು ನಗರದ ತುಂಬ ಮೆರವಣಿಗೆ ಮಾಡಿದರು. ನಂತರ ದಿಲೀಪರವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಗೆಳೆಯನಂತಿದ್ದ ಟಗರಿಗೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Share this News
error: Content is protected !!