April 22, 2021

ಜಮೀನು ನೀಡಿದರೆ ತಾಲೂಕಿಗೊಂದು ಬಾಲಭವನ: ಜಿಲ್ಲಾ ಬಾಲಭವನದ ಉದ್ಯಾನವನ ನವೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ರೂ.ನೆರವು

ಹಾವೇರಿ: ಹಾವೇರಿ ಜಿಲ್ಲಾ ಕೇಂದ್ರದ ಬಾಲಭವನದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ರೂ.ವರೆಗೆ ಅನುದಾನ ಒದಗಿಸಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ಚಿಕ್ಕಮ್ಮ ಬಸವರಾಜ ಅವರು ತಿಳಿಸಿದರು.

ಗುರುವಾರ ಜಿಲ್ಲಾ ಬಾಲಭವನದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಾಲಭವನ ಉದ್ಯಾನವನ, ಕಟ್ಟಡವನ್ನು ಆಕರ್ಷಣೀಯವಾಗಿ ನವೀಕರಸಬೇಕು. ಮಕ್ಕಳ ಗಮನಸೆಳೆಯಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಗಳು ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಲು ಸೂಚಿಸಲಾಗಿದೆ. ಪ್ರಸ್ತಾವನೆ ಸ್ವೀಕೃತವಾದ ತಕ್ಷಣವೇ ಕೇಂದ್ರ ಬಾಲಭವನ ಸೊಸೈಟಿಯಿಂದ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ತಾಲೂಕಿಗೊಂದು ಭವನ: ಜಿಲ್ಲಾಡಳಿತದಿಂದ ಜಮೀನು ಒದಗಿಸಿದರೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬಾಲಭವನ ನಿರ್ಮಾಣಮಾಡಿ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು.

ಈಗಾಗಲೇ ಜಿಲ್ಲಾ ಕೇಂದ್ರದಲ್ಲಿರುವ ಬಾಲಭವನದಲ್ಲಿ ಮಕ್ಕಳ ಮನರಂಜನೆಗಾಗಿ ಕೇಂದ್ರ ಬಾಲಭವನದ ಅನುದಾನದಲ್ಲಿ ಪುಟಾಣಿ ರೈಲನ್ನು ಅಳವಡಿಸಲಾಗಿದೆ. ಆಟಿಕೆಗಳಾದ ಲಿಟಲ್ ಮಾಸ್ಟರ್, ಸಿ.ಸಾ.ಎಚ್.ಎಟ್‍ಸಿಟರ್, ಯ.ಸ್ವಿಂಗ್, ಅಡಲ್ಟ್ ಸಿಟರ್, ಆರ್ಚ್ ಸಿಟ್ ವಿಲ್, ಇಐಂಗ್ಲೋ ಕ್ಲೆಂಬರ್, ಜಂಬು ಸಿ.ಸಾ, ಅಳವಡಿಸಲಾಗಿದೆ. ಪ್ರತಿ ವರ್ಷ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ, ಕಲಾಶ್ರೀ ಶಿಬಿರ, ವಾರಾಂತ್ಯ ಚಟುವಟಿಕೆ, ಬಾಲಶ್ರೀ ಪ್ರಶಸ್ತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

*ಸಲಹೆ*

ಬಾಲಭವನದ ಚಟುವಟಿಕೆಗೆ ಹಾಗೂ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಅಭಿವೃದ್ಧಿಯ ಪ್ರಸ್ತಾವನೆಗೆ ತಕ್ಕಂತೆ ಸರ್ಕಾರ ಮತ್ತು ಕೇಂದ್ರ ಬಾಲಭವನ ಅನುದಾನದಲ್ಲಿ ನೆರವು ಒದಗಿಸಲಾಗುವುದು. ಆದರೆ ಸ್ಥಳೀಯ ಅಧಿಕಾರಿಗಳಿಂದ ಬಾಲಭವನದ ಅಭಿವೃದ್ಧಿಗೆ ಯಾವುದೇ ಬೇಡಿಕೆ ಬಂದಿರುವುದಿಲ್ಲ. ಆ ಕಾರಣಕ್ಕಾಗಿ ಅಭಿವೃದ್ಧಿಗೆ ಅನುದಾನ ಬಿಡುಗಡೆಮಾಡಲು ಸಾಧ್ಯವಾಗಿಲ್ಲ. ಇಂದು ಬಾಲಭವನವನ್ನು ಖುದ್ದಾಗಿ ನಾನು ಪರಿಶೀಲನೆ ಮಾಡಿದ್ದೇನೆ. ಇಲ್ಲಿಯ ನ್ಯೂನ್ಯತೆಗಳ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿಮಾಡಿ ಬಾಲಭವನದ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಸಮಾಲೋಚಿಸಲಾಗುವುದು ಹಾಗೂ ಸ್ಥಳೀಯ ಶಾಸಕರು, ಸಂಸದರು ಹಾಗೂ ನಗರಸಭಾ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ಅಭಿವೃದ್ಧಿಗೆ ಸಹಕಾರ ಕೋರುವೆ ಎಂದು ತಿಳಿಸಿದರು.

ನಗರಸಭೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೆರವು ಪಡೆದು ಬಾಲಭವನದ ಉದ್ಯಾನವನ ಅಭಿವೃದ್ಧಿ ಹಾಗೂ ನಿರ್ವಹಣೆಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರದ ಪ್ರತಿಯೊಂದು ಇಲಾಖೆ ಜೋಡಿಸಿಕೊಂಡು ನೆರವಿನೊಂದಿಗೆ ಜಿಲ್ಲಾ ಬಾಲಭವನದ ಚಟುವಟಿಕೆಗಳನ್ನು ಉತ್ತಮಪಡಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಬಾಲಭವನದಲ್ಲಿ 1.25 ಎಕರೆ ಜಮೀನು ಇದೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಜಾಗದ ಮುಂಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣಮಾಡಿದರೆ ಬಾಲಭವನ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗುವುದಿಲ್ಲ. ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅವಶ್ಯಕವಾದ ಅನುದಾನವನ್ನು ಸ್ಥಳೀಯ ಶಾಸಕರು ಹಾಗೂ ಸಂಸದರ ನಿಧಿಯಲ್ಲಿ ಪಡೆಯಲು ಸಲಹೆ ನೀಡಿದ ಅವರು ಕೊರತೆ ಬಿದ್ದರೆ ಕೇಂದ್ರ ಬಾಲಭವನ ಸಮಿತಿ ವತಿಯಿಂದ ಅನುದಾನ ಒದಗಿಸಲಾಗುವುದು ಎಂದರು.

*ಸುಧಾರಣೆ ಅವಶ್ಯ*

ಬಾಲಭವನದ ಉದ್ಯಾನವನದ ಸಮಗ್ರ ಅಭಿವೃದ್ಧಿ, ವಾತಾವರಣ ಸುಚಿತ್ವಗೊಳಿಸುವುದು, ಮಕ್ಕಳ ಕಲಿಕೆಯ ಕಟ್ಟಡದ ಗೋಡೆಗಳಿಗೆ ಉತ್ತಮ ಫ್ರೇಮ್‍ಗಳನ್ನು ಅಳವಡಿಸಿ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು, ಮಕ್ಕಳ ಆಟಿಕೆಗಳ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಸುಧಾರಣೆಮಾಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಬಾಲಭವನದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

*ಅಸಮಾಧಾನ*:

ಜಿಲ್ಲಾ ಬಾಲಭವನದ ಉದ್ಯಾನವನ ಹಾಗೂ ಕಚೇರಿ ಆವರಣದ ನಿರ್ವಹಣೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೈರ್ಮಲ್ಯದ ಕೊರತೆ ಕಾಡುತ್ತಿದೆ. ಅನಾಗರೀಕ ವಾತಾವರಣವಿದೆ. ಎಲ್ಲೆಂದರಲ್ಲಿ ಕಸ ಬಿದ್ದಿದೆ, ಕೊಳಚೆ ನೀರು ನಿಂತಿದೆ. ಸಮರ್ಪಕವಾಗಿ ನಿರ್ವಹಣೆಮಾಡಿರುವುದಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.

ಬಾಲಭವನದ ನವೀಕರಣ ಮತ್ತು ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಇಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಗೆ ಮುನ್ನ ಬಾಲಭವನ ಉದ್ಯಾನವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಪ್ರಭಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀನಿವಾಸ ಆಲದರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಸೋಮನಗೌಡ, ಕಚೇರಿ ನಿರೂಪಣಾಧಿಕಾರಿ ಶ್ರೀಮತಿ ಭಾರತಿ ಇಂಗಳೇರ ಇತರರು ಉಪಸ್ಥಿತರಿದ್ದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!