April 22, 2021

ಕರೋನಾ ಎರಡನೇಯ ಅಲೆ: ಯುದ್ದ ಸನ್ನದರಾದ ಜಿಲ್ಲೆಯ ಅಧಿಕಾರಿಗಳು..!

ಕರೋನಾ ಎರಡನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ: ಕ್ರಮಕ್ಕೆ ಸೂಚಿಸಲಾದ ಅಂಶಗಳಾವವು?

ಹಾವೇರಿ: ಜಿಲ್ಲೆಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಬೇಕು. ಕೊಳವೆಬಾವಿ ಮೋಟರ್‍ಗಳ ದುರಸ್ಥಿಗೆ ತಾಲೂಕಾವಾರು ಟೀಮ್ ಮಾಡಿ ನಿಗಾವಹಿಸಲು ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ ಜೈನ್ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಮುಂಜಾಗೃತಾ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಪ್ರಗತಿಯ ಮಾಹಿತಿ ಪಡೆದ ಅವರು, ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಆಲಿಸಲು ಸಹಾಯವಾಣಿ ತೆರೆದು ತುರ್ತು ದುರಸ್ಥಿಗೆ ಪ್ರತ್ಯೇಕ ತಂಡಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು.

ಕೋವಿಡ್ ಮುನ್ನೆಚ್ಚರಿಕೆ

ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಬೆಳಗಾವಿ ಮಾರ್ಗದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಸೇರಿದಂತೆ ಹೊರ ಜಿಲ್ಲೆಯಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ರ್ಯಾಂಡಮ್ ಆಗಿ ತಪಾಸಣೆ ನಡೆಸಬೇಕು. ಐ.ಎಲ್.ಐ., ಸಾರಿ ಪ್ರಕರಣಗಳು ಒಳಗೊಂಡಂತೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚುಮಾಡಬೇಕು. ಜಿಲ್ಲೆಯಲ್ಲಿ ಕೋವಿಡ್ ಕಡಿಮೆಯಾಗಿದೆ ಎಂದು ರಿಲ್ಯಾಕ್ಸ್ ಆಗದೆ ಎರಡನೇ ಅಲೆಯನ್ನು ಎದುರಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ದ್ವಿಗುಣಗೊಳಿಸುವ ಜೊತೆಗೆ ವ್ಯಾಕ್ಸಿನ್ ನೀಡಿಕೆ ಪ್ರಮಾಣವನ್ನು ಹೆಚ್ಚಳಮಾಡಬೇಕು. ಈ ಕುರಿತಂತೆ ಜನರಿಗೆ ಜಾಗೃತಿ ಮೂಡಿಸಬೇಕು. ಮೋಟಿವೇಷನ್ ಮೂಲಕ ಸಾರ್ವಜನಿಕರು ಸ್ವ ಪ್ರೇರಣೆಯಿಂದ ಕೋವಿಡ್ ವ್ಯಾಕ್ಸಿನ್ ಪಡೆಯಲು ಮುಂದಾಗುವಂತೆ ಕ್ರಮವಹಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರವಾರು, ಕಾಲಕಾಲಕ್ಕೆ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

ಫ್ರಂಟ್‍ಲೈನ್ ವಾರಿಯರ್‍ಗಳ ಎರಡನೇ ಸುತ್ತಿನ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣದ ಮಾಹಿತಿ ಪಡೆದ ಅವರು, ಮುಂಚೂಣಿ ವಾರಿಯರ್‍ಗಳ ಪೈಕಿ ಪೌರಕಾರ್ಮಿಕರು ಸೇರಿದಂತೆ ಬಹುಪಾಲು ಜನ ಅನಕ್ಷರಸ್ಥರಿದ್ದಾರೆ. ಈ ಜನರಿಗೆ ಎರಡನೇ ಸುತ್ತಿನ ವ್ಯಾಕ್ಸಿನ್ ಪಡೆಯಲು ಖುದ್ದಾಗಿ ಮಾಹಿತಿ ನೀಡಲು ಕ್ರಮವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಕಮಾಡಿ ಹೈರಿಸ್ಕ್ ಜನ 45 ವಯೋಮಾನ ಮೇಲ್ಪಟ್ಟವರು, ಗಂಭೀರ ಕಾಯಿಲೆಗಳಿಂದ ಬಳಲುವವರು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ನೀಡಿಕೆ/ ಹೆಚ್ಚಿನ ಕಾರ್ಯಯೋಜನೆ ರೂಪಿಸಲು ಕ್ರಮವಹಿಸಬೇಕು. ಪ್ರತಿ ಆಶಾ ಕಾರ್ಯಕರ್ತರು ಪ್ರತಿದಿನ ಐದು ಜನರನ್ನು ವ್ಯಾಕ್ಸಿನ್‍ಗೆ ಕರೆತರುವ ಕುರಿತಂತೆ ಕ್ರಮವಹಿಸಬೇಕು. ಹೆಚ್ಚು ಜನರಿಗೆ ಅರಿವು ಮೂಡಿಸಿ ಮನವೊಲಿಸಿ ಕೋವಿಡ್ ವ್ಯಾಕ್ಸಿನ್‍ಗೆ ಕ್ರಮವಹಿಸುವಂತೆ ಸಲಹೆ ನೀಡಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!