July 25, 2021

ಮಾರ್ಚ್ 20, ವಿಶ್ವ ಗುಬ್ಬಿ ದಿನ: ಅಳಿವಿನಂಚಿನತ್ತ ಸಾಗುತ್ತಿರುವ ಗುಬ್ಬಚ್ಚಿಯನ್ನು ರಕ್ಷಿಸೋಣ ಬನ್ನಿ..!.

ಹಳ್ಳಿಗಳ ಮನೆಯಲ್ಲಿ ಆಲಾರಮ್ ನಂತೆ ಕೆಲಸ ಮಾಡುತಿದ್ದ, ಸದಾ ಗುಂಪು ಗುಂಪಾಗಿ ತನ್ನ ಸಹಚರರೊಂದಿಗೆ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುವ, ಯಾವಾಗಲೂ ಒಗ್ಗಟ್ಟಿನಿಂದ ಚೀಂವ್ ಚೀಂವ್ ಸದ್ದು ಮಾಡುತ್ತಾ ಗೀಜುಗೂಡುವ ಗಾತ್ರದಲ್ಲಿ ಚಿಕ್ಕದಾದ ಜನರ ಮೆಚ್ಚುಗೆ ಪಾತ್ರವಾದ ಜನರ ಮಧ್ಯೆಯೇ ಬದುಕುವ ಪುಟ್ಟ ಪಕ್ಷಿಯೇ “ಗುಬ್ಬಚ್ಚಿ”.

ಅತ್ಯಂತ ಸೂಕ್ಷ್ಮ ಸ್ವಭಾವದ ಜೀವಿಯಾಗಿರುವ ಗುಬ್ಬಿ(ಗುಬ್ಬಚ್ಚಿ). ಅಕ್ಕಿ, ರಾಗಿ, ಜೋಳ, ಸಣ್ಣ ಪುಟ್ಟ ಗೆದ್ದಲು ಹುಳುಗಳನ್ನು ತಿಂದು ಬದುಕುತ್ತದೆ. ಊರಿನ ಬೀದಿ ಬೀದಿ, ಮನೆಯಂಗಳ, ಸೂರುಗಳಲಿ ಗುಂಪು ಗುಂಪಾಗಿ ಲವಲವಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ ನಮ್ಮೊಂದಿಗೆ ಜೀವಿಸುತ್ತಿದ್ದ ಗುಬ್ಬಚ್ಚಿಗಳು ಇಂದು ಅಪರೂಪವಾಗಿವೆ. ವಿನಾಶದತ್ತ ಮುಖಮಾಡಿವೆ. ಕಾಲಾಂತರದಲ್ಲಿ ಕೇವಲ ಫೋಟೋದಲ್ಲಿ ನೋಡುವಂತಹ ದುಸ್ಥಿತಿ ಉಂಟಾಗುವ ಅಪಾಯದ ಸ್ಥಿತಿ ಎದುರಾಗಿದೆ.
ಹಲವು ವಿಶೇಷತೆಯಿಂದ ಪಕ್ಷಿ ಪ್ರಿಯರಿಗೆ ಆಕರ್ಷಿತವಾದ ಗುಬ್ಬಿ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಇದರ ಇರುವಿಕೆ, ಹಾಗೂ ಗುಬ್ಬಚ್ಚಿಯ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ “ಮಾರ್ಚ್ 20 ರಂದು ವಿಶ್ವ ಗುಬ್ಬಿ ದಿನ“ ಆಚರಿಸಲಾಗುತ್ತಿದೆ.
ಗುಬ್ಬಚ್ಚಿಗಳು ಮನೆಯ ಗೋಡೆಗಳ ಮೇಲೆ ಗೂಡು ಕಟ್ಟಿ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಒಂದು ಬಾರಿ ಮೊಟ್ಟೆ ಇಟ್ಟರೇ 3ರಿಂದ 4 ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ವೃದ್ಧಿಸುತ್ತದೆ. ಗುಬ್ಬಚ್ಚಿಗಳ ಕಾಲುಗಳು ಅತ್ಯಂತ ತೆಳುವಾಗಿರುವ ಕಾರಣ ಅವುಗಳು ಜಿಗಿಯುತ್ತಾ, ಕುಪ್ಪಳಿಸುತ್ತಾ, ಹಾರುತ್ತಿರುವ ದೃಶ್ಯಕ್ಕೆ ಮನಸೋತವರಿಲ್ಲ.
ನಮ್ಮ ಬಾಲ್ಯದ ಸಂತೋಷ, ಹಲವು ಭಾವನೆಗಳ ಬೆಳವಣಿಗೆ ಕಥೆ ಕಾವ್ಯಗಳಿಗೆ ಸ್ಪೂರ್ತಿ ಚಿಲುಮೆಯಾಗಿದ್ದ ಗುಬ್ಬಿ ಸಂತತಿಯ ಉಳಿವಿನ ಹೊಣೆಗಾರಿಕೆ ನಮ್ಮದಾಗಿದೆ. ಅಭಿವೃದ್ಧಿ ನೆಪದಲ್ಲಿ ಗಿಡ ಮರಗಳನ್ನು ಕಡಿಯುತ್ತಿರುವುದರಿಂದ, ಮರ ಗಿಡಗಳ ಜಾಗದಲ್ಲಿ ಬಹುಮಹಡಿಯ ಕಟ್ಟಡಗಳು ತಲೆ ಎತ್ತಿರುವುದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಸಾಧ್ಯವಾಗುತ್ತಿಲ್ಲ. ರೈತರ ಜಮೀನಿನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು, ನಾಶಕ ಗಳಿಂದ ಸತ್ತು ಹೊದ ಹುಳಗಳನ್ನು ಗುಬ್ಬಿಗಳು ತಿನ್ನುತ್ತಿರುದರಿಂದ ಗುಬ್ಬಿಗಳು ಕಣ್ಮರೆಯಾಗುತ್ತಿವೆ. ಮೊಬೈಲ್ ನೆಟ್‍ವರ್ಕ್ ಟವರ್‍ಗಳಿಂದ ಹೊರಸೂಸುವ ವಿಕಿರಣಗಳು ಗುಬ್ಬಿ ಸಂತತಿಯ ನಾಶಕ್ಕೆ ಕಾರಣವಾಗಿವೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.


ಇತ್ತೀಚಿನ ವರದಿಯ ಪ್ರಕಾರ ಅತ್ಯಂತ ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲಿ ಗುಬ್ಬಿಯೂ ಒಂದು. ಅವು ವಿನಾಶದ ಅಂಚಿನಲ್ಲಿದ್ದು, ಮುಂದಿನ ದಿನಗಳಲ್ಲಿ ಗುಬ್ಬಿ ಕಾಣಸಿಗುವುದು ಅಪರೂಪವಾಗುವ ಸಾಧ್ಯತೆಗಳಿವೆ. ಅತ್ಯಂತ ಅಗಾಧವಾಗಿ ಕಾಣಸಿಗುತ್ತಿದ್ದ ಗುಬ್ಬಿ ಇಂದು ಮಾನವನ ಅತಿಯಾದ ಆಧುನೀಕರಣದ ಪ್ರಭಾವದಿಂದ ಕಣ್ಮರೆಯಾಗುತ್ತಿವೆ. ಬೆರಳೆಣಿಕೆಯಷ್ಟು ಗುಬ್ಬಿಗಳು ಮಾತ್ರ ಕಾಣಸಿಗುತ್ತವೆ. ಹಾಗಾಗಿ ನಾವೆಲ್ಲ ಗುಬ್ಬಿಗಳ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ಅವುಗಳನ್ನು ನೀಡಬೇಕಾಗಿದೆ.
ನಮ್ಮ ಜನಜೀವನದೊಂದಿಗೆ ಬೆರೆತು ಬೆಳೆದು ಬಂದಿರುವ ಗುಬ್ಬಿಗಳ ರಕ್ಷಣೆಗಾಗಿ ನಾವೆಲ್ಲ ಸಂಕಲ್ಪ ತೊಡಬೇಕಾಗಿದೆ. ನಮ್ಮ ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ಗುಬ್ಬಿಗಳು ಗೂಡು ಕಟ್ಟಲು ಗಿಡ ಮರಗಳನ್ನು ಬೆಳೆಸಬೇಕಾಗಿದೆ. ಮನೆಯ ಮೇಲೆ ಅಥವಾ ಗುಬ್ಬಿಗಳ ಒಡಾಡುವ ಜಾಗದಲ್ಲಿ ಕಾಳುಗಳನ್ನು,ದವಸ ಧಾನ್ಯಗಳನ್ನು ಬಟ್ಟಲಲ್ಲಿ ಹಾಕಿಡುವ ಮೂಲಕ ಅವುಗಳ ಆಹಾರದ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ನೀಗಿಸೋಣ. ಬಾಯಾರಿಕೆಯನ್ನು ನಿವಾರಿಸಲು ಪಾತ್ರೆಗಳು-ಮಡಿಕೆಗಳಲ್ಲಿ ನೀರು ಸಂಗ್ರಹಿಸಿಡುವ ಮನೋಭಾವ ಬೆಳೆಸಿಕೊಳ್ಳಣ. ಗುಬ್ಬಿಯ ಸಂರಕ್ಷಣೆಯ ಅರಿವು ಹೊಂದೋಣ ಸ್ನೇಹಿತರಿಗೆ , ನೆರೆಹೊರೆಯವರಿಗೆ ಜಾಗೃತಿ ಮೂಡಿಸಿ,ಗುಬ್ಬಿ ಗುಬ್ಬಚ್ಚಿಗಳನ್ನು ಸಂರಕ್ಷಿಸೋಣ.

ಕೆಂಚವ್ವ. ಹನುಮಂತಪ್ಪ. ಮೋಟೆಬೆನ್ನೂರು
ಪತ್ರಿಕೋದ್ಯಮ ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ

Share this News
error: Content is protected !!