ಹಾವೇರಿ- ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನ ವಿರೋಧಿಸಿ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶ ನಡೆಯಿತು.
ಹಾವೇರಿ ಮುನಿಸಿಪಲ್ ಮೈದಾನದಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶದಲ್ಲಿ ಮಾತನಾಡಿದ ರಾಷ್ಟ್ರೀಯ ರೈತ ನಾಯಕ ರಾಕೇಶ ಟಿಕಾಯಿತ್ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಎಷ್ಟು ದಿನಗಳ ಕಾಲ ಮುಂದುವರೆಸಬೇಕು ಎಂಬುದು ಗೊತ್ತಿಲ್ಲ. ಸರಕಾರ ರೈತರ ಜೊತೆಗೆ ಮಾತನಾಡುತ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರಕಾರ ಇದೆ. ವಾಸ್ತವವಾಗಿ ಈ ಸರಕಾರ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿದೆ. ಕಿಸಾನ್ ಕ್ರಾಂತಿ ಗೇಟ್ ನಲ್ಲಿ ನಾವು ಕುಳಿತಿರುವ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ಕಂಪನಿ ಇದೆ.
ಸರಕಾರದ ಅಧೀನದಲ್ಲಿರುವ ಆ ಕಂಪನಿಯನ್ನು ಸರಕಾರ ಮಾರಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಕಿಡಿ ಕಾರಿದರು. ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ಗುತ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೆ ಆಗಿದೆ. ಈ ಮೂರು ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ. ನಾವೆಲ್ಲರೂ ನಮ್ಮ ನಮ್ಮಲ್ಲಿರುವ ಟ್ರ್ಯಾಕ್ಟರ್ ಗಳನ್ನು ನಮ್ಮ ಅಸ್ತ್ರಗಳನ್ನಾಗಿ ಬಳಸಬೇಕು. ಟ್ರ್ಯಾಕ್ಟರ್ ಗಳನ್ನು ನಾವು ಈಗ ಹೊರಗೆ ತರಬೇಕಾಗಿದೆ ಎಂದರು.
ಟ್ರ್ಯಾಕ್ಟರ್ ಗಳು ರೈತರ ಪ್ರತಿಭಟನೆ ಸಮಯದಲ್ಲಿ ಮಲಗುವುದಕ್ಕೆ, ಬ್ಯಾರಿಕೇಡ್ ಗಳನ್ನು ಮುರಿಯುವದಕ್ಕೆ ಉಪಯೋಗ ಆಗುತ್ತವೆ. ನಾವೆಲ್ಲರೂ ಈ ಕೆಲಸವನ್ನು ದೆಹಲಿಯಲ್ಲಿ ಮಾಡಿದರೆ, ನೀವು ಈ ಕೆಲಸವನ್ನು ಬೆಂಗಳೂರಿನಲ್ಲಿ ಮಾಡಬೇಕು ಎಂದು ರೈತರಿಗೆ ಕರೆ ನೀಡಿದರು. ಪ್ರಧಾನಿ ಹೇಳ್ತಿದ್ದಾರೆ ನಮ್ಮ ದೇಶದಲ್ಲಿರುವುದು ಮುಕ್ತ ಮಾರುಕಟ್ಟೆ ಅಂತಾ. ನಮಗೆ ಮುಕ್ತ ಮಾರುಕಟ್ಟೆ ಇದೆ ಅನ್ನುವುದಾದರೆ ನಾವು ಡಿಸಿ, ತಹಶೀಲ್ದಾರ ಕಚೇರಿಯಲ್ಲಿ ಮಾರಾಟ ಮಾಡುವ ಕೆಲಸ ಮಾಡಬೇಕಿದೆ. ನೀವೆ ಹೇಳಿದಂತೆ ನಾವು ಮುಕ್ತ ಮಾರುಕಟ್ಟೆಗೆ ತಂದಿದ್ದೇವೆ ಖರೀದಿಸಿ ಅಂತಾ ಹೇಳಬೇಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರೈತ ಮುಖಂಡ ರಾಕೇಶ ಟಿಕಾಯತ್ ಕಿಡಿ ಕಾರಿದ್ದಾರೆ .
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!