April 22, 2021

ಎರಡು ರೂಪಾಯಿ ಕದ್ದಿದ್ದಕ್ಕೆ ಬಾಲಕನ ಬೆನ್ನು ಮೇಲೆ ಕಲ್ಲು ಇಟ್ಟು ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೇ ಬಾಲಕ ಸಾವು..!

ಹಾವೇರಿ- ಅಂಗಡಿಯಲ್ಲಿ ಮೂರ್ನಾಲ್ಕು ರೂಪಾಯಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಹತ್ತು ವರ್ಷದ ಬಾಲಕನನ್ನು ಹೊಡೆದು ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಹರೀಶಯ್ಯ ಹಿರೇಮಠ (10ವರ್ಷ) ಎಂದು ಗುರುತಿಸಲಾಗಿದೆ.

ಮಾರ್ಚ್ 16 ರಂದು ಪ್ರವೀಣ ಕರಿಶೆಟ್ಟರ ಎಂಬುವರ ದಿನಸಿ ಅಂಗಡಿಗೆ ಬಾಲಕ ಹೋಗಿದ್ದ. ಈ ವೇಳೆ ಅಂಗಡಿಯಲ್ಲಿ ಹಣ ಕಳ್ಳತನ ಮಾಡಿದ್ದಾನೆ ಎಂದು ಹರೀಶಯ್ಯನನ್ನು ಪ್ರವೀಣ ಕರಿಶೆಟ್ಟರ ಮನೆಯ ಹಿತ್ತಲಿನಲ್ಲಿ ಕಿವಿ ಹಿಡಿಸಿ, ಬೆನ್ನಿನ ಮೇಲೆ ಭಾರವಾದ ಕಲ್ಲನ್ನಿಟ್ಟು ನಿಲ್ಲಿಸಿದ್ದಾರೆ. ನಂತರ ಗುಂಡಿಯಲ್ಲಿ ಹೂತು ಹಾಕಲು ಪ್ರಯತ್ನಿಸಿದ್ದಾರೆ ಎಂದು ಮೃತ ಬಾಲಕನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಅಸ್ವಸ್ಥ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇವತ್ತು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸಾವಿಗೆ ಕಾರಣರೆನ್ನಲಾದ ಪ್ರವೀಣ ಕರಿಶೆಟ್ಟರ, ಬಸವಣ್ಣೆವ್ವ ಕರಿಶೆಟ್ಟರ, ಶಿವರುದ್ರಪ್ಪ ಹಾವೇರಿ, ಕುಮಾರ ಹಾವೇರಿ ಎಂಬುವರ ವಿರುದ್ಧ ಹರೀಶಯ್ಯ ತಂದೆ ದೂರು ಕೊಟ್ಟಿದ್ದಾರೆ.

ಪ್ರವೀಣನ ಅಂಗಡಿ ಮುಂದೆ ಬಾಲಕನ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಬಂಧನದ ನಂತರ ಬಾಲಕ‌ನ ಅಂತ್ಯಕ್ರಿಯೆ ಮಾಡುವುದಾಗಿ ಮೃತ ಬಾಲಕನ ಸಂಬಂಧಿಕರು ಬಿಗಿಪಟ್ಟು ಹಿಡಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!