July 25, 2021

ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯಿತ್ ವಿರುದ್ಧ ಹಾವೇರಿಯಲ್ಲಿ FIR ದಾಖಲು: ಯಾಕೆ ಗೊತ್ತಾ..?

ಕಳೆದ ಮಾರ್ಚ್ 21 ರಂದು ಹಾವೇರಿಯಲ್ಲಿ ನಡೆದ ರೈತರ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ರೈತ ಹೋರಾಟಗಾರರ ಮುಖಂಡ, ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ವಿರುದ್ಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಹಾವೇರಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಕಳೆದ 120 ದಿನಗಳಿಂದ ದೆಹಲಿ ಹೊರವಲಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ನಾಯಕತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಸೇರಿದಂತೆ ಪ್ರಮುಖ ರೈತ ಮುಖಂಡರ ಜೊತೆ ಕೇಂದ್ರ ಸರ್ಕಾರ ಹಲವು ಬಾರಿ ಮಾತುಕತೆ ನಡೆಸಿದೆ. ಆದ್ರೆ ಅದ್ಯಾವುದೂ ಫಲಪ್ರದವಾಗಿಲ್ಲ. ಇದೀಗ ದೆಹಲಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ರೈತ ಚಳುವಳಿಗಳನ್ನ ಆರಂಭಿಸುವ ಉದ್ದೇಶದಿಂದ ರಾಜ್ಯದಲ್ಲಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತ ಜಾಗೃತಿ ಸಮಾವೇಶಗಳನ್ನ ನಡೆಸಲಾಗುತ್ತಿದೆ. ಈಗಾಗಲೇ ನಡೆದ ಸಮಾವೇಶಗಳಲ್ಲಿ ದೆಹಲಿ ಹೋರಾಟಗಾರ ರಾಕೇಶ್ ಟಿಕಾಯಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣಗಳನ್ನ ಮಾಡಿದ್ದಾರೆ.

ಮಾರ್ಚ್ 21 ರಂದು ಹಾವೇರಿಯಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆ ರಾಕೇಶ ಟಿಕಾಯಿತ್ ವಿರುದ್ಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡಿದ ರಾಕೇಶ್ ಟಿಕಾಯಿತ್, ದೆಹಲಿಯಲ್ಲಿ ಟ್ರ್ಯಾಕ್ಟರ್ ಗಳನ್ನ ಬಳಸಿಕೊಂಡು ಪ್ರತಿಭಟನೆ ಮಾಡಿದಂತೆ ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಗಳನ್ನ ಅಸ್ತ್ರಗಳನ್ನಾಗಿ ಬಳಸಿಕೊಂಡು ಪ್ರತಿಭಟನೆ ಮಾಡುವಂತೆ ಹೇಳಿದ್ದರು ಈ ಹೇಳಿಕೆ ಹಿನ್ನಲೆಯಲ್ಲಿ ನಗರಠಾಣೆ ಸಿಪಿಐ ಪ್ರಹ್ಲಾದ ಚನ್ನಗಿರಿ FIR ದಾಖಲಿಸಿದ್ದಾರೆ.

ರಾಕೇಶ್ ಟಿಕಾಯಿತ್ ಭಾಷಣದ ಅಂಶಗಳು ಏನು ?

ಹಾವೇರಿ ಸಮಾವೇಶದಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ದೆಹಲಿಯಲ್ಲಿ ನಡಿತಿರೋ ಹೋರಾಟ ಎಷ್ಟು ಕಾಲ ಮುಂದುವರೆಸಬೇಕು ಎಂಬುದು ಗೊತ್ತಿಲ್ಲ ಸರಕಾರ ರೈತರ ಜೊತೆಗೆ ಮಾತನಾಡ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರಕಾರ ಇದೆ ವಾಸ್ತವವಾಗಿ ಈ ಸರಕಾರ ಬಂಡವಾಳದಾರರ ಕೈಯಲ್ಲಿ ಸಿಲುಕಿದೆ. ಕಿಸಾನ್ ಕ್ರಾಂತಿ ಗೇಟ್ ನಲ್ಲಿ ನಾವು ಕುಳಿತಿರೋ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನ ತಯಾರು ಮಾಡೋ ಕಂಪನಿ ಇದೆ ಸರಕಾರದ ಅಧೀನದಲ್ಲಿರೋ ಆ ಕಂಪನಿಯನ್ನ ಸರಕಾರ ಮಾರಲು ಹೊರಟಿದೆ.

ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡೋ ಕೆಲಸ ನಾವು ಮಾಡ್ತಿದ್ದೇವೆ ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೆ ಆಗಿದೆ ಈ ಮೂರು ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ. “ನಾವೆಲ್ಲರೂ ನಮ್ಮ ನಮ್ಮಲ್ಲಿರೋ ಟ್ರ್ಯಾಕ್ಟರ್ ಗಳನ್ನ ಅಸ್ತ್ರಗಳನ್ನಾಗಿ ಬಳಸಬೇಕು. ಟ್ರ್ಯಾಕ್ಟರ್ ಗಳನ್ನ ನಾವು ಈಗ ಹೊರಗೆ ತರಬೇಕಾಗಿದೆ. ಟ್ರ್ಯಾಕ್ಟರ್ ಪ್ರತಿಭಟನೆ ಸಮಯದಲ್ಲಿ ಮಲಗೋಕೆ, ಬ್ಯಾರಿಕೇಡ್ ಗಳನ್ನ ಮುರಿಯೋಕೂ ಆಗುತ್ತೆ.

ನಾವೆಲ್ಲರೂ ಈ ಕೆಲಸವನ್ನ ದೆಹಲಿಯಲ್ಲಿ ಮಾಡಿದರೆ, ನೀವು ಈ ಕೆಲಸವನ್ನ ಬೆಂಗಳೂರಲ್ಲಿ ಮಾಡಬೇಕು. ಪೊಲೀಸರು ನಿಮ್ಮನ್ನು ತಡೆಯಲು ಬ್ಯಾರಿಕೇಡ್ ಗಳನ್ನ ಹಾಕಿ ಯತ್ನಿಸುತ್ತಾರೆ ಆಗ ಟ್ರಾಕ್ಟರ್ ಮೂಲಕ ಬ್ಯಾರಿಕೇಡ್ ಮುರಿದು ನುಗ್ಗಬೇಕು. ಅದಕ್ಕೆ ನೀವು ನಿಮ್ಮ ಊರುಗಳಲ್ಲೇ ಮನೆಗಳಲ್ಲಿ ಟ್ರ್ಯಾಕ್ಟರ್ ನೊಂದಿಗೆ ತಯಾರಿಸಿ ನಡೆಸಬೇಕು (ಪ್ರಾಕ್ಟೀಸ್) ಮಾಡಬೇಕು”

ಪ್ರಧಾನಿ ಹೇಳ್ತಿದ್ದಾರೆ ನಮ್ಮ ದೇಶದಲ್ಲಿರೋದು ಮುಕ್ತ ಮಾರುಕಟ್ಟೆ ಅಂತಾ, ನಮಗೆ ಮುಕ್ತ ಮಾರುಕಟ್ಟೆ ಇದೆ ಅನ್ನೋದಾದರೆ ನಾವು ಡಿಸಿ, ತಹಶೀಲ್ದಾರ ಕಚೇರಿಯಲ್ಲಿ ಮಾರಾಟ ಮಾಡುವ ಕೆಲಸ ಮಾಡಬೇಕಿದೆ. ನೀವೆ ಹೇಳಿದಂತೆ ನಾವು ಮುಕ್ತ ಮಾರುಕಟ್ಟೆಗೆ ತಂದಿದ್ದೇವೆ ಖರೀದಿಸಿ ಅಂತಾ ಹೇಳಬೇಕಿದೆ ಎಂದು ವಾಗ್ದಾಳಿ ನಡೆಸಿದ್ದರು.

Share this News
error: Content is protected !!